ಹಾಸನ: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ, ನಾಲ್ಕು ಮನೆಗಳಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಖದೀಮರು ಮರುದಿನ ತಡರಾತ್ರಿ ಮುಸುಕು ಧರಿಸಿ ಮತ್ತೆ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಚನ್ನರಾಪಟ್ಟಣದಲ್ಲಿ ನಡೆದಿದೆ.
ಚನ್ನರಾಯಪಟ್ಟಣದ ಗಾಯತ್ರಿ ಬಡಾವಣೆ ಅಮರಾವತಿ ಬಡಾವಣೆ ಅಕ್ಷರ ಶಾಲೆಯ ಸುತ್ತಮುತ್ತ ಶುಕ್ರವಾರ ರಾತ್ರಿ ಎರಡು ಮನೆಗಳಲ್ಲಿ ಖದೀಮರು ಕಳ್ಳತನ ಮಾಡಿ ಚಿನ್ನಾಭರಣ ನಗದು ದೋಚಿದ್ದರು. ನಾಲ್ಕು ಮನೆಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಕಳ್ಳರು ಶನಿವಾರ ರಾತ್ರಿ ಮತ್ತೆ ಅಮರಾವತಿ ಬಡಾವಣೆ ಮನೆಗಳ ಎದುರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹೊಂಚು ಹಾಕಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಳೆದ ಒಂದು ವಾರದಿಂದ ಈ ಬಡಾವಣೆಗಳಲ್ಲಿ ಮನೆ ಕಳ್ಳತನದಿಂದ ಆತಂಕ ಗೊಂಡಿರುವ ಸ್ಥಳೀಯರು ಪೊಲೀಸರು ರಾತ್ರಿ ಗಸ್ತು ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪದೇಪದೇ ಮನೆಗಳ್ಳತನ ಮುಸುಕು ದಾರಿಗಳ ಓಡಾಟ ಹೆಚ್ಚಿದ್ದು ಸೂಕ್ತ ಗಸ್ತು ಹಾಗೂ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ನಿವಾಸಿಗಳು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಅರಸೀಕೆರೆ ಪಟ್ಟಣದಲ್ಲಿ ಚಡ್ಡಿ ಗ್ಯಾಂಗ್ ಕಾಣಿಸಿಕೊಂಡು ನಿವಾಸಿಗಳಲ್ಲಿ ಆತಂಕ ಸೃಷ್ಟಿ ಮಾಡಿತ್ತು ಇದೀಗ ಚನ್ನರಾಯಪಟ್ಟಣದ ಹಲವು ಬಡಾವಣೆಗಳಲ್ಲಿ ಮುಸುಕುಧಾರಿ ಯುವಕರ ತಂಡ ಸಕ್ರಿಯವಾಗಿದ್ದು ಮತ್ತಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.