ಹಾಸನದಲ್ಲಿ ವಿಚ್ಛೇದಿತ ಪತ್ನಿಗೆ ಮಾಜಿ ಪತಿಯಿಂದ ಕಿರುಕುಳ: ಮೊಬೈಲ್ ಕಳವು, ಕರೆ ಮಾಡಿದ ಪೊಲೀಸರಿಗೇ ಅವಾಜ಼್ ಆಡಿಯೋ ವೈರಲ್!

ಹಾಸನ, ಮೇ 21, 2025: ತನ್ನ ವಿಚ್ಛೇದಿತ ಪತ್ನಿಯ ಮೊಬೈಲ್ ಕಳವು ಮಾಡಿದ ಪ್ರಕರಣದ ಆರೋಪಿಯೊಬ್ಬ ತನಗೆ ಕರೆ ಮಾಡಿದ ಪೊಲೀಸರಿಗೆ ಆವಾಜ್ ಹಾಕಿರುವ ಆಡಿಯೋ ವೈರಲ್ ಆಗಿದೆ.

ಹಿನ್ನೆಲೆ:
ನಗರದ ತೆಲುಗರ ಬೀದಿಯ ನಿವಾಸಿ ಗ್ರೀಷ್ಮಾ ಎಂಬ ಮಹಿಳೆ ತನ್ನ ಮಾಜಿ ಪತಿ ಮಧುಕುಮಾರ್‌ನಿಂದ ನಿರಂತರ ಕಿರುಕುಳ ಅನುಭವಿಸುತ್ತಿರುವ ಬಗ್ಗೆ ಹಾಸನ ನಗರ ಪೊಲೀಸ್ ಠಾಣೆಗೆ ದೂರು ಅರ್ಜಿ ನೀಡಿದ್ದರು.

ಗ್ರೀಷ್ಮಾ ಅವರ ನೋಕಿಯಾ S 23 ಮೊಬೈಲ್‌ಫೋನ್‌ಅನ್ನು ಮಧುಕುಮಾರ್ ಕಳವು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಗ್ರೀಷ್ಮಾ ತಮ್ಮ ಪುತ್ರನೊಂದಿಗೆ ಹಾಸನ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದರು. ಈ ವೇಳೆ ಮಧುಕುಮಾರ್ ತನ್ನ ಮಗನ ಮೊಬೈಲ್‌ಗೆ ಕರೆ ಮಾಡಿದ್ದು, ಗ್ರೀಷ್ಮಾ ಅವರ ಪುತ್ರ ಕೂಡಲೇ ಫೋನ್‌ನನ್ನು ಎಸ್‌ಎಚ್‌ಓ (ಎಎಸ್‌ಐ) ಪುಟ್ಟಸ್ವಾಮಿ ಅವರಿಗೆ ನೀಡಿದ್ದಾನೆ.

ಆದರೆ, ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡುವ ಬದಲು, ಮಧುಕುಮಾರ್ ಅವಾಜ಼್ ಹಾಕಿ, ಅವಹೇಳನಕಾರಿ ಮಾತುಗಳ ಮೂಲಕ ಬಳಸಿ ಪೊಲೀಸರಿಗೇ ಧಮ್ಕಿ ಹಾಕಿರುವ ಆಡಿಯೋ ವೈರಲ್ ಆಗಿದೆ.

ಈ ಘಟನೆಯ ಬಗ್ಗೆ ಇದುವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.