ಮರ್ಕುಲಿ ಗ್ರಾಪಂ ಸದಸ್ಯನ ಮನೆ ಬಾಗಿಲಿಗೆ ಬೆಂಕಿ ಹಚ್ಚಿದ ದುರುಳರು; ಹತ್ಯೆ ಯತ್ನದಿಂದ ಪಾರಾದ ನಾಗಣ್ಣ

ಹಾಸನ: ತಾಲೂಕಿನ ಮರ್ಕುಲಿಯ ಗ್ರಾಮ ಪಂಚಾಯಿತಿ ಸದಸ್ಯ ನಾಗಣ್ಣ ಅವರ ಮನೆ ಬಾಗಿಲಿಗೆ ಶುಕ್ರವಾರ ರಾತ್ರಿ ಬೆಂಕಿ ಹಾಕಿ ಕೊಲೆಗೆ ಯತ್ನಿಸಲಾಗಿದೆ.

ಬಾಗಿಲಿಗೆ ಬೆಂಕಿ ಹೊತ್ತಿರುವುದನ್ನು ಕಂಡು ತಕ್ಷಣ ಮನೆಯಿಂದ ಹೊರ ಬಂದ ನಾಗಣ್ಣ ಪ್ರಾಣ ಉಳಿಸಿಕೊಂಡಿದ್ದಾರೆ. ಘಟನೆ ಸಮಯದಲ್ಲಿ ಮನೆ ಒಳಗೆ ಅವರೊಬ್ಬರೇ ಇದ್ದಿದ್ದರಿಂದ ಕುಟುಂಬ ಸದಸ್ಯರೂ ಅಪಾಯದಿಂದ ಪಾರಾಗಿದ್ದಾರೆ.

ನೆರೆಹೊರೆಯವರು ನಾಗಣ್ಣ ಅವರ ಕೂಗಾಟದಿಂದ ಎಚ್ಚರಗೊಂಡು ಹೊರ ಬಂದು ಬೆಂಕಿ ನಂದಿಸಿ ಮನೆ ಅಗ್ನಿಗಾಹುತಿ ಆಗುವುದನ್ನು ತಪ್ಪಿಸಿದ್ದಾರೆ.

ಗ್ರಾಮದ ರವಿ ಎಂಬವರೊಂದಿಗೆ ಜಮೀನು ಸಂಬಂಧ ನಾಗಣ್ಣ ವ್ಯಾಜ್ಯ ಹೊಂದಿದ್ದಾರೆ. ಆ ದ್ವೇಷದ ಹಿನ್ನೆಲೆಯಲ್ಲಿ ಅವರನ್ನು ಹತ್ಯೆ ಮಾಡಲು ದುಷ್ಕರ್ಮಿಗಳು ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿ ಜೋಳದ ದಿಂಡು ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಶಾಂತಿಗ್ರಾಮ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಆರೋಪಿ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.