ಮನೆಗೆ ನುಗ್ಗಿ ಪಿಸ್ತೂಲಿನಿಂದ ಗುಂಡು ಹಾರಿಸಿ ಚಿನ್ನಾಭರಣ ದರೋಡೆ; ಬೇಲೂರು ತಾಲೂಕಿನ ಮುದಿಗೆರೆಯಲ್ಲಿ ಆತಂಕ

ಗೋಡೆಗೆ ಗುಂಡು ಹಾರಿಸಿ ಬೆದರಿಕೆ; ದರೋಡೆ ನಂತರ ಗಾಳಿಯಲ್ಲಿ ಫೈರ್ ಮಾಡಿ ಪರಾರಿ

ಹಾಸನ: ಪಿಸ್ತೂಲ್ ಹಿಡಿದು ಮನೆಗೆ ನುಗ್ಗಿದ ದರೋಡೆಕೋರರು ಗೋಡೆಗೆ ಗುಂಡು ಹಾರಿಸಿ ಚಿನ್ನಾಭರಣ ಕಸಿದುಕೊಂಡು ಪರಾರಿಯಾಗಿರುವ ಆತಂಕಕಾರಿ ಘಟನೆ ಬೇಲೂರು ತಾಲ್ಲೂಕಿನ, ಮುದಿಗೆರೆ ಕ್ರಾಸ್‌ನಲ್ಲಿ ಶನಿವಾರ ಸಂಜೆ ನಡೆದಿದೆ.

ರವಿ ಎಂಬುವವರ ಮನೆಗೆ ಮುಖಕ್ಕೆ ಕರ್ಚೀಫ್ ಕಟ್ಟಿಕೊಂಸು ನುಗ್ಗಿದ ಇಬ್ಬರು ದರೋಡೆಕೋರರು ಮನೆಯಲ್ಲಿದ್ದ ರವಿ ಅವರ ಪತ್ನಿ ಶ್ರುತಿ ಹಾಗೂ ಅವರ ತಾಯಿ ಚಂದ್ರಮ್ಮ ಅವರಿಗೆ ಪಿಸ್ತೂಲ್ ತೋರಿಸಿ ಮೈಮೇಲಿದ್ದ ಚಿನ್ನಾಭರಣ ನೀಡುವಂತೆ ಹೆದರಿಸಿದರು.

ಆದರೆ ಇಬ್ಬರೂ ಚಿನ್ನಾಭರ ಬಿಚ್ಚಲು ನಿರಾಕರಿಸಿದಾಗ ಗೋಡೆಗೆ ಗುಂಡು ಹಾರಿಸಿದ ದರೋಡೆಕೋರರ ಆರ್ಭಟಕ್ಕೆ ಬೆದರಿದ ಇಬ್ಬರೂ ಸುರಕ್ಷತೆ ದೃಷ್ಟಿಯಿಂದ ಮಕ್ಕಳನ್ನು ಕೊಠಡಿಯಲ್ಲ ಕೂಡಿಹಾಕಿದರು.

ತಮ್ಮ ಪ್ರಾಣಕ್ಕೆ ಅಪಾಯ ಮಾಡದಂತೆ ಮನವಿ ಮಾಡುತ್ತಲೇ ತಮ್ಮ ಮೈಮೇಲಿದ್ದ
ಒಂದು ಚಿನ್ನದ ತಾಳಿ, ಒಂದು ಜೊತೆ ಚಿನ್ನದ ಓಲೆ, ಎರಡು ಚಿನ್ನದ ಗುಂಡು ಹಾಗೂ ಮೊಬೈಲ್ ಗಳನ್ನು ಅವರಿಗೆ ಕೊಟ್ಟರು.

ದರೋಡೆಕೋರರು ವಸ್ತುಗಳನ್ನು ದೋಚಿ ಪರಾರಿಯಾಗುವ ವೇಳೆ ಪಿಸ್ತೂಲ್ ಶಬ್ದ ಕೇಳಿ ಓಡಿ ಬಂದ ಶ್ರುತಿ ಅವರ ಪತಿ ರವಿ ಇಬ್ಬರನ್ನೂ ಹಿಡಿಯಲು ಮುಂದಾದ ವೇಳೆ ಮತ್ತೊಮ್ಮೆ ಗಾಳಿಯಲ್ಲಿ ಫೈಯರ್ ಮಾಡಿದ ದುಷ್ಕರ್ಮಿಗಳು ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾದರು.

ಪಿಸ್ತೂಲ್ ತೋರಿಸಿ ಕನ್ನಡ ಭಾಷೆಯಲ್ಲೇ ಚಿನ್ನಾಭರಣ ನೀಡುವಂತೆ ಹೆದರಿಸಿ ಚಿನ್ನಾಭರಣ ಕಸಿದು ಪರಾರಿಯಾದರು ಎಂದು ಶ್ರುತಿ ಪೊಲೀಸರಿಗೆ ತಿಳಿಸಿದ್ದಾರೆ.

ದರೋಡೆಕೋರರ ಓಡಾಟದ ದೃಶ್ಯಗಳು ಗ್ರಾಮದ ಸಿಸಿಟಿವಿಯೊಂದರಲ್ಲಿ ಸೆರೆಯಾಗಿವೆ. ಸ್ಥಳಕ್ಕೆ ಎಸ್ಪಿ ಮಹಮದ್ ಸುಜೀತಾ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಬೇಲೂರು ಪೊಲೀಸ್ ಠಾಣೆ ದರೋಡೆ ಪ್ರಕರಣ ದಾಖಲಾಗಿದೆ.