ದೈತ್ಯ ಕಾಡಾನೆ ಕರಡಿಯಿಂದ ಮತ್ತೊಮ್ಮೆ ದಾಳಿ; ಸಮಯಪ್ರಜ್ಞೆ ಮೆರೆದು ಜೀವ ಉಳಿಸಿಕೊಂಡ ರೈತನ ಕಿವಿಯೇ ತುಂಡಾಯ್ತು!

ತಲೆ ಅಪ್ಪಚ್ಚಿ ಮಾಡಲು ಕಾಲಿಟ್ಟ ಆನೆಗೆ ಸಿಗದೆ ಉರುಳಿ ಬಚಾವಾದ ರೈತ

ಹಾಸನ: ಆಕ್ರಮಣಕಾರಿ ವರ್ತನೆಯ ದೈತ್ಯ ಕಾಡಾನೆ ಕರಡಿ ಮತ್ತೊಮ್ಮೆ ಮನುಷ್ಯರ ಮೇಲೆ ದಾಳಿ ನಡೆಸಿದ್ದು, ರೈತರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೇಲೂರು ತಾಲ್ಲೂಕಿನ ಬೊಮ್ಮಡಿಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.

ದೇವರಾಜು (58) ಗಂಭೀರವಾಗಿ ಗಾಯಗೊಂಡ ರೈತ. ಜಮೀನಿಂದ ಜಾನುವಾರುಗಳೊಂದಿಗೆ ಮನೆಗೆ ಬರುತ್ತಿದ್ದ ದೇವರಾಜು ಮೇಲೆ ಏಕಾಏಕಿ ದಾಳಿ ಮಾಡಿದ ಕಾಡಾನೆಯಿಂದ‌ತಪ್ಪಿಸಿಕೊಳ್ಳಲು ಯತ್ನಿಸಿದ ಅವರು ವೇಗವಾಗಿ ಓಡಲೆತ್ನಿಸಿದರು.

ಆದರೆ ದೇವರಾಜು ಅವರನ್ನು ಸೊಂಡಲಿನಿಂದ ಹಿಡಿದು ಎಸೆದ ಕರಡಿ, ಅವರು ಕೆಳಗೆ ಬಿದ್ದ ನಂತರ ಕಾಲಿನಿಂದ ತುಳಿದಿದೆ. ಅಗಲೂ ಅವರು ಧೈರ್ಯಗುಂದದೆ ತಪ್ಪಿಸಿಕೊಳ್ಳಲು ಹೊರಳಿದ್ದರಿಂದ ಆನೆ ಕಾಲಡಿಗೆ ಸಿಲುಕಲಿದ್ದ ತಲೆ ಬದಲಿಗೆ ಕಿವಿ ಮಾತ್ರವೇ ಸಿಲುಕಿ ಹರಿದು ಬಿದ್ದಿದೆ.

ಉರುಳಿದ ದೇವರಾಜು ಹಳ್ಳಕ್ಕೆ ಬೀಳುತ್ತಿದ್ದಂತೆ ನರಹಂತಕ ಕಾಡಾನೆ ಕಾಫಿ ತೋಟದೊಳಗೆ ಹೋಗಿದೆ.

ಗಾಯಾಳುವಿಗೆ ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು.

ಶುಕ್ರವಾರ ರಾತ್ರಿಯಷ್ಟೇ ಕರಡಿ ಆನೆ‌ ಬಿಕ್ಕೋಡು ಗ್ರಾಮದೊಳಗೆ ಓಡಾಡಿ ಆತಂಕ ಮೂಡಿಸಿತ್ತು. ಸ್ಥಳಕ್ಕೆ ಅರೇಹಳ್ಳಿ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದರು.