ಹಾಸನ, ಫೆಬ್ರವರಿ 28: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ಹಾಸನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಹತ್ವದ ಹೇಳಿಕೆ ನೀಡಿದ್ದಾರೆ.
ರಾಜ್ಯಾಧ್ಯಕ್ಷರ ಆಯ್ಕೆ ಸಂಬಂಧ ವಿಜಯೇಂದ್ರ ಸ್ಪಷ್ಟನೆ:
“ಎಲ್ಲಾ ಜಿಲ್ಲಾಧ್ಯಕ್ಷರ ತೀರ್ಮಾನ ಆಗಿದೆ. ಉಳಿದ ಜಿಲ್ಲೆಗಳ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಕೇಂದ್ರದ ನಿರ್ಧಾರ ಯಾವಾಗ ಆಗುತ್ತೋ ಆಗ ಘೋಷಣೆ ಮಾಡಲಾಗುತ್ತದೆ,” ಎಂದು ಅವರು ತಿಳಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರನ್ನೇ ಕೇಳಬೇಕು:
ಡಿ.ಕೆ.ಶಿವಕುಮಾರ್ ಅವರ ಕೆಲ ಹೇಳಿಕೆಗಳು ರಾಜಕೀಯ ಹಿನ್ನಲೆಯಲ್ಲಿ ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ, ವಿಜಯೇಂದ್, “ಯಾರು ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಡಿ.ಕೆ.ಶಿವಕುಮಾರ್ ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಎನ್ನುವುದನ್ನು ಅವರನ್ನೇ ಕೇಳಬೇಕು,” ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ನಿರೀಕ್ಷೆ?
ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ತೀವ್ರಗೊಂಡಿದ್ದು, “ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಮತ್ತು ತಾವು ಮುಖ್ಯಮಂತ್ರಿಯಾಗಬೇಕು ಎಂಬ ನಿರೀಕ್ಷೆಯಲ್ಲಿ ಹಲವರು ಕಾಯುತ್ತಿದ್ದಾರೆ,” ಎಂದರು.
“ಕಾಂಗ್ರೆಸ್ ಸರ್ಕಾರ ತಾಲಿಬಾನ್ ಸರ್ಕಾರ”
ರಾಜ್ಯದ ಕಾಂಗ್ರೆಸ್ ಸರ್ಕಾರದ ಧೋರಣೆ ಬಗ್ಗೆ ಟೀಕಿಸಿದ ವಿಜಯೇಂದ್ರ, ರಾಜ್ಯದಲ್ಲಿ ಕ್ಷಿಪ್ರ ”ರಾಜಕೀಯ ಬೆಳವಣಿಗೆಯ ಮುನ್ಸೂಚನೆ ಕಾಣುತ್ತಿದ್ದೇವೆ. ಸರ್ಕಾರ ಎಲ್ಲಿದೆ? ಕಾಂಗ್ರೆಸ್ ಆಡಳಿತ ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿ ನಡೆಯುತ್ತಿದೆ. ಹಿಂದುಗಳು ಹಾಗೂ ಹಿಂದುತ್ವಕ್ಕೆ ಗೌರವ ಇಲ್ಲ. ಇದು ಒಂದು ರೀತಿಯಲ್ಲಿ ತಾಲಿಬಾನ್ ಸರ್ಕಾರವಾಗಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಂಭಮೇಳಕ್ಕೆ ಡಿ.ಕೆ.ಶಿವಕುಮಾರ್ ಭೇಟಿ – ರಾಜಕೀಯ ತೀವ್ರ ಚರ್ಚೆ
ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದರೂ, ಡಿ.ಕೆ.ಶಿವಕುಮಾರ್ ಕುಟುಂಬ ಸಮೇತ ಭಾಗವಹಿಸಿರುವುದರ ಬಗ್ಗೆ ವಿಜಯೇಂದ್ರ ಪ್ರಸ್ತಾಪಿಸಿದರು. “ಅವರು ನಮ್ಮ ಪ್ರಾಚೀನ ಪರಂಪರೆಯ ಆಧಾರದ ಮೇಲೆ ಹೋಗಿ ಬಂದಿದ್ದಾರೆ. ಅದಕ್ಕೆ ಬಿಜೆಪಿಗೂ ಆ ಬೆಳವಣಿಗೆಗೂ ಯಾವುದೇ ಸಂಬಂಧವಿಲ್ಲ,” ಎಂದರು.
ಡಿ.ಕೆ.ಶಿವಕುಮಾರ್ ಬಿಜೆಪಿ ಸೇರುತ್ತಾರಾ?
ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಒಟ್ಟಿಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳು ಶುರುವಾಗಿದೆ. “ಶಿವರಾತ್ರಿ ಸಂದರ್ಭದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ ಡಿ.ಕೆ.ಶಿವಕುಮಾರ್ ಬಿಜೆಪಿಗೆ ಸೇರುತ್ತಾರೆ ಎಂಬ ಗಾಳಿಸುದ್ದಿ ಹರಿದಾಡುತ್ತಿದೆ. ಇದರಲ್ಲಿ ಅರ್ಥವೇ ಇಲ್ಲ,” ಎಂದು ಸ್ಪಷ್ಟಪಡಿಸಿದರು.
ಬಜೆಟ್ ಮಂಡನೆ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, “ಮುಖ್ಯಮಂತ್ರಿಗಳಿಗೆ ನಾವು ಬಹಿರಂಗವಾಗಿ ಪತ್ರ ಬರೆದಿದ್ದೇವೆ. ಜನರ ನಿರೀಕ್ಷೆಗೆ ತಕ್ಕಂತೆ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಬೇಕು. ರಾಜ್ಯದ ಅಭಿವೃದ್ಧಿಗೆ ಅನುದಾನ ನೀಡಬೇಕು. ಗ್ಯಾರಂಟಿಗಳೇ ಅಭಿವೃದ್ಧಿ ಆಗಿಬಿಟ್ಟರೆ ಶಾಸಕರು ತಲೆ ಎತ್ತಿ ಓಡಾಡಲು ಸಾಧ್ಯವಿಲ್ಲ,” ಎಂದರು.
ಮೊದಲ ಬಾರಿಗೆ ಗೆದ್ದ ಶಾಸಕರಿಗೆ ಅನುದಾನ ನೀಡಿಲ್ಲ?
“ಮೊದಲ ಬಾರಿಗೆ ಗೆದ್ದ ಶಾಸಕರಿಗೆ ಸರ್ಕಾರ ಯಾವುದೇ ಅನುದಾನ ನೀಡಿಲ್ಲ. ಇದನ್ನು ಮುಖ್ಯಮಂತ್ರಿಗಳು ಪರಿಗಣಿಸಬೇಕು. ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕ ಬಜೆಟ್ ಮಂಡನೆ ಮಾಡಬೇಕೆಂಬ ಆಶಾಭಾವನೆಯಲ್ಲಿದ್ದೇವೆ” ಎಂದರು.
ಗ್ಯಾರೆಂಟಿ ಯೋಜನೆಗಳ ಬಗ್ಗೆ ವಿಜಯೇಂದ್ರ ಕಿಡಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ವಿಜಯೇಂದ್ರ ಕೂಡ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದರು. “ಗ್ಯಾರೆಂಟಿಗಳೇ ಅಭಿವೃದ್ಧಿ ಆಗಿಬಿಟ್ಟರೆ ಶಾಸಕರು ತಲೆ ಎತ್ತಿ ಓಡಾಡಲು ಸಾಧ್ಯವಿಲ್ಲ. ಜನರು ಕೂಡ ನಮ್ಮನ್ನು ಕ್ಷಮಿಸುವುದಿಲ್ಲ,” ಎಂದು ಅವರು ಟೀಕಿಸಿದರು. ಸರ್ಕಾರ ಗ್ಯಾರೆಂಟಿ ಯೋಜನೆಗಳ ಹೆಸರಿನಲ್ಲಿ ಬಜೆಟ್ ಸಮತೋಲನ ಕಳೆದುಕೊಂಡಿದೆ ಮತ್ತು ಕ್ಷೇತ್ರಗಳಿಗೆ ತಕ್ಕಂತೆ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿದರು.