ಹಾಸನ; ಪ್ರಾದೇಶಿಕ ಸಾರಿಗೆ ಅಧಿಕಾರಿ ನಿಯಮಗಳ ನೆಪದಲ್ಲಿ ಸಾರ್ವಜನಿಕರ ಕೆಲಸಗಳ ಸುಗಮ ಕಾರ್ಯನಿರ್ವಹಣೆಗೆ ತಡೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿ ಇಂದು ವಾಹನ ವಿಮೆ ಮಾರಾಟಗಾರರು, ಖಾಸಗಿ ಫೈನಾನ್ಸ್ ಕಂಪೆನಿಗಳ ಪ್ರತಿನಿಧಿಗಳು ತಮ್ಮ ವ್ಯವಹಾರ ಬಂದ್ ಮಾಡಿ ಆಕ್ರೋಶ ಹೊರಹಾಕಿದರು. ಇದರಿಂದ ಇಡೀ ದಿನ ನಗರದ ಆರ್.ಟಿ.ಒ. ಕಚೇರಿ ಆವರಣ ಭಣಗುಡುತ್ತಿತ್ತು.
ಒಂದು ತಿಂಗಳ ಹಿಂದಷ್ಟೇ ಅಧಿಕಾರ ವಹಿಸಿಕೊಂಡಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜಕುಮಾರ್ ಅವರು ಅನಗತ್ಯವಾಗಿ ಸಾರ್ವಜನಿಕರ ಕೆಲಸಗಳಿಗೆ ತಡೆಯೊಡ್ಡುತ್ತಿದ್ದಾರೆ. ನಿಯಮಗಳ ನೆಪಹೇಳಿ ಜನರನ್ನು ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿ ಆರ್.ಟಿ.ಒ. ಕಚೇರಿ ಸುತ್ತಮುತ್ತಲಿನ ವಿವಿಧ ವಿಭಾಗಗಳ ಏಜೆಂಟರು, ಆನ್ ಲೈನ್ ಅರ್ಜಿ ಸಲ್ಲಿಸುವವರು ತಮ್ಮ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿದರು.
ಗ್ರಾಹಕರು ವಾಹನಗಳನ್ನು ಮುಂಗಡ ಪಾವತಿಸಿ ಖರೀದಿ ಮಾಡಿರುತ್ತಾರೆ. ನಿಗದಿತ ದಿನಗಳ ಒಳಗೆ ನಾನು ಹಣ ಪಾವತಿಸುವುದಾಗಿ ಮಾಲೀಕರಿಗೆ ಭರವಸೆ ನೀಡಿರುತ್ತಾರೆ. ಆದರೆ ಆರ್.ಟಿ.ಒ.ಕಚೇರಿಯಲ್ಲಿ ಹೊಸ ಅಧಿಕಾರಿ ಬಂದ ನಂತರ ನಿಯಮಗಳ ನೆಪದಲ್ಲಿ ಕಡತ ವಿಲೇವಾರಿ ತಡೆಯುತ್ತಿದ್ದಾರೆ. ಇದರಿಂದ ವಾಹನ ಸಾಲ ದೊರೆಯದೆ ಹಲವರು ವಾಹನಗಳಿಗೆ ನೀಡಿದ ಮುಂಗಡ ಹಣ ಕಳೆದುಕೊಳ್ಳುತ್ತಿದ್ದಾರೆ ಎಂದು ಏಜೆಂಟರು ಅಸಮಾಧಾನ ವ್ಯಕ್ತಪಡಿಸಿದರು.