ಹಾಸನ: ಈಗ ಕೇಂದ್ರದಲ್ಲಿ ಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಒಂದು ಸೆಕೆಂಡ್ ಪುರುಸೊತ್ತಿಲ್ಲದಂತೆ ಮಾಡುವಷ್ಟು ಕೆಲಸವಿರುತ್ತದೆ ಆದರೂ ಶನಿವಾರ, ಭಾನುವಾರ ಇಲ್ಲಿಗೆ ಬಂದು ಅವರಿವರನ್ನು ಅರ್ಥವೂ ಇಲ್ಲದಂತೆ ಬೈಯ್ಯುತ್ತಾರೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
ಚನ್ನರಾಯಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುಮಾರಸ್ವಾಮಿ ಹೇಳಿಕೆಗೆ ಮತ್ತೆ ಪ್ರತಿಕ್ರಿಯೆ ಕೊಡಬಾರದು ಅಂತ ಒಂದು ಮಧ್ಯಾಹ್ನವಷ್ಟೇ ತೀರ್ಮಾನಿಸಿದೆ ಎಂದರು.
ಏನಾದರೂ ಸತ್ವ ಇದ್ದರೆ ಅದಕ್ಕೆ ಪ್ರತಿಕ್ರಿಯಿಸುವುದು ಒಳ್ಳೆಯದು, ಅದರಲ್ಲಿ ತಪ್ಪೇನಿಲ್ಲ. ಆರೋಪದಲ್ಲಿ ಸತ್ಯವೇ ಇಲ್ಲದಿದ್ದಾಗ ನಾವು ಅವರ ತರಹನೇ ಆಗಿಬಿಡ್ತಿವಿ. ಕುಮಾರಸ್ವಾಮಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ, ಇವರೂ ಬಾಯಿಗೆ ಬಂದಂಗೆ ಮಾತನಾಡುತ್ತಾರಲ್ಲಾ ಅಂತಾರೆ.
ಆ ಕಡೆ, ಈ ಕಡೆಯೆಲ್ಲಾ ಜನ ನಿಂತಿರುತ್ತಾರಲ್ಲಾ ಅವರು ಈ ಚೆಲುವರಾಯಸ್ವಾಮಿನೂ ಕುಮಾರಸ್ವಾಮಿ ತರಹ ಆಗೋದ್ನಲ್ಲಾ ಅವರಿಗೆ ಇವನಿಗೂ ಏನು ವ್ಯತ್ಯಾಸ ಎನ್ನುತ್ತಾರೆ. ಅದಕ್ಕೆ ಇದ್ದಕ್ಕಿದ್ದಂತೆ ಮಧ್ಯಾಹ್ನ ಇನ್ನು ಮುಂದೆ ಕುಮಾರಸ್ವಾಮಿ ಹೇಳಿಕೆಗಳಿಗೆ ಪ್ರತಿಕ್ರಿಯಿಸಬಾರದು ಎಂದು ತೀರ್ಮಾನ ಮಾಡಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿ, ಮಂತ್ರಿ ಆಗುವುದು ಅಪರೂಪ. ಯಾವುದೋ ಪೂರ್ವಜನ್ಮದ ಪುಣ್ಯದಿಂದ ನಾವು ಮಂತ್ರಿ ಆಗಿದ್ದೇವೆ. ಅವರು ಕೇವಲ ಇಬ್ಬರು ಸಂಸದರು ಗೆದ್ದರೂ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ.
ಕುಮಾರಸ್ವಾಮಿ ಹದಿನಾಲ್ಕು ತಿಂಗಳು ಮುಖ್ಯಮಂತ್ರಿ ಆಗಿದ್ದಾಗ ಏನು ಮಾಡಿದರು ಎನ್ನುವುದನ್ನು ತಿರುಗಿ ನೋಡಿದ್ರೆ ಸಾಕು. ಯಾವ ರೀತಿ ನಡೆದುಕೊಂಡರು ಏನೇನು ಕಾರ್ಯಕ್ರಮ ಕೊಟ್ಟರು ಎನ್ನುವುದು ತಿಳಿಯುತ್ತದೆ ಎಂದು ವಾಗ್ದಾಳಿ ನಡೆಸಿದರು.