ಎರಡೂವರೆ ತಿಂಗಳ‌ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಭವಾನಿ ರೇವಣ್ಣ; ಕುರ್ಚಿಯಲ್ಲೇ ಕುಳಿತು ಭಾಷಣ, ದೇವರ ಅನುಗ್ರಹದಿಂದ ಆರೋಗ್ಯವಾಗಿದ್ದೇನೆ ಎಂದ ಗೌಡರ ಸೊಸೆ

ಪ್ರಚಾರಕ್ಕೆ ನಾನೂ ಬರ್ತಿನಿ, ನಿಮ್ಮ ಜತೆ ಸರಿಸಮನಾಗಿ ಓಡಾಡಿಕೊಂಡು ಕೆಲಸ ಮಾಡ್ತಿನಿ ಎಂದು ಕುರ್ಚಿಯಲ್ಲಿ ಕುಳಿತೇ ಭಾಷಣ ಮಾಡಿದರು.

ಹಾಸನ : ಟೊಯೋಟಾ ವೆಲ್ ಫೈರ್ ಕಾರು ಅಪಘಾತ ಪ್ರಕರಣ ನಂತರ ಸಾರ್ವಜನಿಕ ಓಡಾಟದಿಂದ ದೂರಾಗಿದ್ದ ಭವಾನಿ ರೇವಣ್ಣ ಎರಡೂವರೆ ತಿಂಗಳ ಬಳಿಕ ಗುರುವಾರ ಮಾವಿನಕೆರೆ ಬೆಟ್ಟದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು.

ಡಿಸೆಂಬರ್ 3 ರಂದು ಮೈಸೂರು ಜಿಲ್ಲೆ, ಸಾಲಿಗ್ರಾಮ ಬಳಿ ಭವಾನಿರೇವಣ್ಣ ಕಾರಿಗೆ ಡಿಕ್ಕಿ ಬೈಕ್ ಡಿಕ್ಕಿ ಹೊಡೆದ ನಂತರ ಅವರು ಬೈಕ್ ಸವಾರನ ಮೇಲೆ ಕಿಡಿಕಾರಿ, ಪ್ರಕರಣ ದಾಖಲಿಸಲು ಒತ್ತಡ ಹೇರಿದ್ದ ವಿಡಿಯೋ
ಸಿಕ್ಕಾಪಟ್ಟೆ ವೈರಲ್ ಆಗಿದ್ದಲ್ಲದೆ, ಸಾರ್ವಜನಿಕ ವಲಯದಲ್ಲಿ ಇಮೇಜ್ ಡ್ಯಾಮೇಜ್ ಗೆ ಕಾರಣವಾಗಿತ್ತು.

ಆದಾದ ಬಳಿಕ ಎರಡೂ ಮಂಡಿಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಭವಾನಿರೇವಣ್ಣ, ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಈಗ ಎರಡೂವರೆ ತಿಂಗಳ ನಂತರ ಹೊರಗೆ ಕಾಣಿಸಿಕೊಂಡಿದ್ದಾರೆ.

ನಿನ್ನೆ ಹೊಳೆನರಸೀಪುರ ತಾಲ್ಲೂಕಿನ, ಮಾವಿನಕೆರೆಯ ವೆಂಕಟರಮಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದರು. ಪತಿ ಎಚ್.ಡಿ.ರೇವಣ್ಣ, ಪುತ್ರರಾದ ಸಂಸದ ಪ್ರಜ್ವಲ್ ಹಾಗೂ ಎಂಎಲ್‌ಸಿ ಸೂರಜ್ ಜತೆ ಮಾವಿನಕೆರೆ ರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಹೊಳೆನರಸೀಪುರ ತಾಲ್ಲೂಕಿನ, ಕಲ್ಲೇನಹಳ್ಳಿ ಗ್ರಾಮದಲ್ಲಿ ಶ್ರೀರಾಮ ದೇವಸ್ಥಾನ ಹಾಗೂ ಗಣೇಶ ಪುನರ್ ಜೀರ್ಣೋದ್ದಾರ ಮತ್ತು ನೂತನ ವಿಗ್ರಹ ಪ್ರತಿಷ್ಠಾಪನೆ, ಕುಂಭಾಭಿಷೇಕದಲ್ಲಿ ಪಾಲ್ಗೊಂಡರು.

ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮನ್ನೆಲ್ಲಾ ನೋಡಿ ಬಹಳ‌ ಖುಷಿಯಾಯಿತು. ದೇವಸ್ಥಾನಕ್ಕೆ ಬಂದು ದೇವರನ್ನು ನೋಡಿ ಮಂಗಳಾರತಿ ತೆಗೆದುಕೊಳ್ಳುತ್ತೇನೆ ಎನ್ನುವುದು ನನಗೆ ಗೊತ್ತಿಲ್ಲ. ಒಂದು ತಿಂಗಳ ಹಿಂದೆ ಎರಡೂ ಮಂಡಿಗಳಿಗೆ ಸರ್ಜರಿ ಆಗಿದೆ ಎಂದರು.

ಕಳೆದ ಭಾರಿ ವಿಧಾನಸಭಾ ಚುನಾವಣೆಯಲ್ಲಿ ಜಾಸ್ತಿ ಓಡಾಟ ಆಯ್ತು, ರೇವಣ್ಣ ಅವರ ಚುನಾವಣೆ ಕಳೆಯಲಿ ಎಂದು ಸುಮ್ಮನಿದ್ದೆ. ಹಾಗಾಗಿ ಹೊಳೆನರಸೀಪುರದಲ್ಲೂ ನಾನು ಕಾಣಿಸಿಕೊಂಡಿಲ್ಲ. ಎಲ್ಲಿ ಮೇಡಂ ನಾಪತ್ತೆಯಾಗಿ ಹೋದ್ರಾ ಅಂದ್ರು, ಇನ್ನೂ ಕೆಲವರು ಅವರ ಅನುಕೂಲಕ್ಕೆ ತಕ್ಕಂತೆ ಬೇರೆಯದನ್ನು ಹುಟ್ಟಾಕಿಕೊಂಡರು ಎಂದರು.

ಏನೋ ಕಾಯಿಲೆ ಬಂದಿದೆ ಹಾಗೇ…ಹೀಗೆ…ಅಂತ, ಆ ದೇವರ ಅನುಗ್ರಹದಿಂದ ನಾನು ಆರೋಗ್ಯವಾಗಿದ್ದೇನೆ. ಇನ್ನೂ ಇಪ್ಪತ್ತು ದಿನ ರೆಸ್ಟ್ ಮಾಡಿದ್ರೆ ಸಾಕು, ಬೇರೆ ಏನೂ ಇಲ್ಲ. ಇನ್ನೊಂದು ಹದಿನೈದು, ಇಪ್ಪತ್ತು ದಿವಸ ಪ್ರಜ್ವಲ್‌ ರೇವಣ್ಣ ಅವರ ಲೋಕಸಭೆ ಚುನಾವಣೆ ಬರುತ್ತೆ, ನೀವೇ ಕರ್ಕಂಡು ಹೋಗಿ ಪ್ರಚಾರಕ್ಕೆ ನಾನೂ ಬರ್ತಿನಿ, ನಿಮ್ಮ ಜತೆ ಸರಿಸಮನಾಗಿ ಓಡಾಡಿಕೊಂಡು ಕೆಲಸ ಮಾಡ್ತಿನಿ ಎಂದು ಕುರ್ಚಿಯಲ್ಲಿ ಕುಳಿತೇ ಭಾಷಣ ಮಾಡಿದರು.