ಮಾಂಗಲ್ಯಧಾರಣೆ ಮುಗಿದ ತಕ್ಷಣ ಪರೀಕ್ಷಾ ಕೇಂದ್ರಕ್ಕೆ ಬಂದ ವಧು: ಮದುವೆಗಾಗಿ ಪರೀಕ್ಷೆ ತಪ್ಪಿಸದ ಯುವತಿ

ಹಾಸನ, ಮೇ 22, 2025: ನಗರದಲ್ಲಿ ಇಂದು ಅಪರೂಪದ ಮತ್ತು ಪ್ರೇರಣಾದಾಯಕ ಘಟನೆಯೊಂದು ನಡೆದಿದೆ. ಮದುವೆಯ ಮುಹೂರ್ತ ಮುಗಿಸಿ, ಮಾಂಗಲ್ಯ ಧಾರಣೆಯಾದ ಕೆಲವೇ ಕ್ಷಣಗಳಲ್ಲಿ ವಧು  ಪರೀಕ್ಷಾ ಕೇಂದ್ರಕ್ಕೆ ಧಾವಿಸಿ, ತನ್ನ ಅಂತಿಮ ವರ್ಷದ ಬಿಕಾಂ ಪರೀಕ್ಷೆಯನ್ನು ಬರೆದಿದ್ದಾರೆ.

ಹಾಸನ ನಗರದ ಚನ್ನಪಟ್ಟಣ ಬಡಾವಣೆಯ ಕುಮಾರ್ ಮತ್ತು ಅನಸೂಯ ದಂಪತಿಯ ಪುತ್ರಿಯಾದ ಕವನ, ಇಂದು ಬೆಳಿಗ್ಗೆ 9 ಗಂಟೆಗೆ ಗುಡ್ಡೆನಹಳ್ಳಿಯ ದಿನೇಶ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ, ಹಾಸನದ ಪ್ರೈಡ್ ಪದವಿ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿಯಾದ ಕವನ, ತನ್ನ ಕೊನೆಯ ವಿಷಯವಾದ ಆದಾಯ ತೆರಿಗೆ ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ತಪ್ಪಿಸಲು ಇಷ್ಟಪಡಲಿಲ್ಲ.

 

ಮದುವೆಯ ಮುಹೂರ್ತ ಮುಗಿಯುತ್ತಿದ್ದಂತೆ, ಕವನ ಅವರ ಸಹೋದರ ಕಾರ್ತಿಕ್ ತನ್ನ ಸಹೋದರಿಯನ್ನು ಮಧು ಮಗಳ ಉಡುಗೆಯಲ್ಲೆ ತಕ್ಷಣವೇ ಪರೀಕ್ಷಾ ಕೇಂದ್ರಕ್ಕೆ ಕರೆತಂದರು. ಪರೀಕ್ಷೆ ಬರೆಯಬೇಕೆಂಬ ಕವನ ಅವರ ಛಲಕ್ಕೆ ಅವರ ಪೋಷಕರು, ಪತಿಯ ಕುಟುಂಬದವರು ಸಂಪೂರ್ಣ ಬೆಂಬಲ ನೀಡಿದರು.