ಪಟ್ಲಬೆಟ್ಟದ ಗೂಂಡಾಗಿರಿ ಪ್ರಕರಣ: ನಾಲ್ವರು ಪಿಕಪ್‌ ಚಾಲಕರ ಬಂಧನ-ಬೆಟ್ಟದ ದಾರಿ ಬಂದ್‌ ಮಾಡಿದ ಅರಣ್ಯ ಇಲಾಖೆ

ಹಾಸನ: ಸಕಲೇಶಪುರ ತಾಲೂಕಿನ ಪಟ್ಲ ಬೆಟ್ಟದಲ್ಲಿ ಬೈಕರ್‌ ಗಳ ಮೇಲೆ ನಡೆದ ಹಲ್ಲೆ ನಂತರದ ಸಾಮಾಜಿಕ ಜಾಲತಾಣದಲ್ಲಿ ಭುಗಿಲೆದ್ದ ಆಕ್ರೋಶದಿಂದ ಎಚ್ಚೆತ್ತ ಅರಣ್ಯ ಇಲಾಖೆ ಬೆಟ್ಟಕ್ಕೆ ವಾಹನಗಳು ತೆರಳದಂತೆ ಮಂಗಳವಾರ ರಸ್ತೆ ಬಂದ್‌ ಮಾಡಿದೆ. ಇನ್ನೊಂದೆಡೆ ಬೈಕರ್ ಗಳ ಮೇಲೆ ಹಲ್ಲೆ ನಡೆಸಿದ ನಾಲ್ವರು ಪಿಕಪ್‌ ವಾಹನ ಚಾಲಕರನ್ನು ಯಸಳೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ಪಿಕಪ್‌ ಚಾಲಕರಾದ ಮದನ್‌, ಗಗನ್‌, ನಿಶಾಂತ್‌, ಕಿರಣ್‌ ಬಂಧಿತರು. ಹಲ್ಲೆಗೊಳಗಾದ ಬೈಕರ್‌ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ದಾರಿ ಬಂದ್:‌ ಇದೆಲ್ಲ ವಿವಾದಗಳಿಂದ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಜೆಸಿಬಿ ಬಳಸಿ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಟ್ರಂಚ್‌ ನಿರ್ಮಾಣ ಮಾಡಿದರು. ಇದರಿಂದ ಇನ್ನು ಮುಂದೆ ಯಾವುದೇ ವಾಹನಗಳು ಪಟ್ಲಬೆಟ್ಟಕ್ಕೆ ಹೋಗುವುದು ಸಾಧ್ಯವಿಲ್ಲದಂತಾಗಿದೆ.

ಜೆಸಿಬಿ ಬಳಸಿ ಪಟ್ಲಬೆಟ್ಟದ ದಾರಿ‌ ಬಂದ್ ಮಾಡಿದ ಅರಣ್ಯ ಇಲಾಖೆ

ಈ ಹಿಂದೆಯೂ ಅರಣ್ಯ ಇಲಾಖೆ ಪಟ್ಲಬೆಟ್ಟಕ್ಕೆ ವಾಹನ ಸಂಚಾರ ನಿಷೇಧಿಸಿ ದಾರಿ ಬಂದ್‌ ಮಾಡಿತ್ತು. ಆಗ ಸ್ಥಳೀಯ ರಾಜಕೀಯ ಮುಖಂಡರಿಗೆ ದಂಬಾಲು ಬಿದ್ದಿದ್ದ ಪಿಕಪ್‌ ಚಾಲಕರು ವಾಹನ ಸಂಚಾರಕ್ಕೆ ಅವಕಾಶಗಿಟ್ಟಿಸಲು ಯಶಸ್ವಿಯಾಗಿದ್ದರು.