ನಾಲ್ಕು ತಿಂಗಳ ಬಳಿಕ ಹಾಸನ ಜಿಲ್ಲೆಗೆ ಬಂದ ದೇವೇಗೌಡರು; ಇಷ್ಟದೈವದ ಸನ್ನಿಧಿಯಲ್ಲಿ ಕಡೇ ಶ್ರಾವಣ ಶನಿವಾರದ ಪೂಜೆ

ಹಾಸನ: ನಾಲ್ಕು ತಿಂಗಳ ಬಳಿಕ ಮಾಜಿಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡ ತವರು ಜಿಲ್ಲೆಗೆ ಅಗಮಿಸಿದ್ದು ತಮ್ಮ ಇಷ್ಟದೈವದ ಸನ್ನಿಧಿಯಲ್ಲಿ ಕಡೇ ಶ್ರಾವಣ ಶನಿವಾರದ ಪೂಜೆಯಲ್ಲಿ ಭಾಗಿಯಾದರು.

ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಹೊಳೆನರಸೀಪುರದ ಹೇಮಾವತಿ ಕ್ರೀಡಾಂಗಣದ ಹೆಲಿಪ್ಯಾಡ್‌ಗೆ ಆಗಮಿಸಿದ ಎಚ್.ಡಿ.ದೇವೇಗೌಡರು ಅಲ್ಲಿಂದ ಕಾರಿನಲ್ಲಿ ಹೊಳೆನರಸೀಪುರ ತಾಲ್ಲೂಕಿನ, ಹಳೆಕೋಟೆ ಗ್ರಾಮದ, ಶ್ರೀ ಬೆಟ್ಟದ ರಂಗನಾಥಸ್ವಾಮಿ ದೇವಾಲಯಕ್ಕೆ ಬಂದರು.

ಕೊನೆಯ ಶ್ರಾವಣ ಶನಿವಾರದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದ ದೇವೇಗೌಡರಿಗೆ ಅರ್ಚಕರು ಪೂರ್ಣ ಕುಂಭ ಸ್ವಾಗತ ಕೋರಿದರು.

ಎಚ್.ಡಿ.ದೇವೇಗೌಡರ ಜತೆ ಪುತ್ರ ಹಾಗೂ ಮಾಜಿ ಸಚಿವ ಎಚ್‌.ಡಿ.ರೇವಣ್ಣ, ಮೊಮ್ಮಗ ಹಾಗೂ ಎಂಎಲ್‌ಸಿ ಡಾ.ಸೂರಜ್ ರೇವಣ್ಣ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಸಂಜೆ ಅವರು ಬೆಂಗಳೂರಿಗೆ ಪ್ರಯಾಣ ಬೆಳಸುವರು.