ಡ್ರಿಲ್ ಕಲಿಯದ ಟ್ರೈನಿ ಪೊಲೀಸರು: ತರಬೇತಿ ಶಾಲೆ ಅಧಿಕಾರಿಗಳು, ಪ್ರಶಿಕ್ಷಣಾರ್ಥಿಗಳಿಗೆ ಬಿಸಿ ಮುಟ್ಟಿಸಿದ ಎಡಿಜಿಪಿ ಅಲೋಕ್ ಕುಮಾರ್

ಹಾಸನ ಪೊಲೀಸ್ ತರಬೇತಿ ಶಾಲೆಗೆ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್:ಪೊಲೀಸ್ ತರಬೇತಿ ಶಾಲೆ ಸಿಬ್ಬಂದಿ ಮತ್ತು ನೂತನವಾಗಿ ತರಬೇತಿಯಲ್ಲಿರುವ ಶಿಬಿರಾರ್ಥಿಗಳಿಗೆ ಬೆಂಡೆತ್ತಿದ ಎಡಿಜಿಪಿ

ಹಾಸನ: ತಾಲ್ಲೂಕಿನ ಗಾಡೇನಹಳ್ಳಿ ಗ್ರಾಮದ ಬಳಿಯಿರುವ ಪೊಲೀಸ್ ತರಬೇತಿ ಶಾಲೆಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಇಂದು ಭೇಟಿ ನೀಡಿದ್ದರು. ಈ ವೇಳೆ ಪೊಲೀಸ್ ತರಬೇತಿ ಶಾಲೆ ಸಿಬ್ಬಂದಿ ಮತ್ತು  ತರಬೇತಿಯಲ್ಲಿರುವ ಪ್ರಶಿಕ್ಷಣಾರ್ಥಿ ಪೊಲೀಸರಿಗೆ ಎಡಿಜಿಪಿ ಅಲೋಕ್ ಕುಮಾರ್ ಬೆವರಿಳಿಸಿದರು.

ಕರ್ನಾಟದಲ್ಲಿ ತರಬೇತಿಯಲ್ಲಿರುವ ಪೊಲೀಸರನ್ನು ಇಲಾಖೆ ಒಳ್ಳೆಯ ರೀತಿಯಲ್ಲಿ ನೋಡಿಕೊಳ್ಳುತ್ತಿದೆ. ನಿಮಗೆ ಮಾಸಿಕ 54 ಸಾವಿರ ರೂ. ಸಂಬಳ ನೀಡುತ್ತಿದೆ. ಈ ಸಂಬಳವನ್ನು ಯಾವ ಕೆಲಸ ಮಾಡದೆ ಇದ್ದರೂ ಟ್ರೈನಿಂಗ್‌ನಲ್ಲೇ ನೀಡಲಾಗುತ್ತಿದೆ.

ಆದರೆ ನಿಮಗೆ ಒಂದು ಡ್ರಿಲ್ ಮಾಡೋಕು ಸರಿಯಾಗಿ ತರಬೇತಿ ನೀಡಿಲ್ಲ ಆದರೂ ಆಡೋಕೆ, ಓಡೋಕೆ, ಓದೋಕೆ ಸಂಬಳ ಸಿಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ನಿಮ್ಮ ಬೇರೆ ಶಿಷ್ಯನ್ನ ಕರೆಯಿರಿ, ಅವರ ಕವಾಯತು ತೋರಿಸಿ ಎಂದು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡರು. ಖುದ್ದು ಡ್ರಿಲ್ ಕಾಷನ್ ಕೊಡಿಸಿ, ತಾವೇ ಡ್ರಿಲ್ ಡೆಮೋ ಮಾಡಿ ತೋರಿಸಿ ಸಿಬ್ಬಂದಿ ಮೇಲೆ ಸಿಟ್ಟಾದ ಎಡಿಜಿಪಿ ಅಲೋಕ್ ಕುಮಾರ್, ಒಂದು ಅಟೆನ್ಷನ್ ಮಾಡೋಕೆ ಬರಲ್ಲ, ನಿಮ್ಮ ಮೇಲೆ ಕ್ರಮ ಆಗಬೇಕಿದೆ. ಮೂರು ತಿಂಗಳು ಟ್ರೈನಿಂಗ್ ಆಯ್ತು ನಿಮಗೆ ಇನ್ನೂ ಡ್ರಿಲ್ ಬರಲ್ಲ ಎಂದು ಕಿಡಿಕಾರಿದರು.