ಹಾಸನ: ಹಾಸನ ಜಿಲ್ಲೆಯ ಕಾಡಾನೆ ಸಮಸ್ಯೆಯನ್ನು ಅಂತ್ಯಗೊಳಿಸಲು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ನಗರದ ಹೇಮಾವತಿ ಪ್ರತಿಮೆ ಬಳಿ ನಾಲ್ಕು ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟ ಅವಧಿ ಧರಣಿ ಸ್ಥಳಕ್ಕೆ ಇಂದು ಅಪರ ಜಿಲ್ಲಾಧಿಕಾರಿ ಶಾಂತಲಾ ಭೇಟಿ ನೀಡಿ ಹೋರಾಟಗಾರರೊಂದಿಗೆ ಚರ್ಚಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿಗಳ ಬಳಿ ಬೇಲೂರು ತಾಲೂಕಿನಲ್ಲಿ ಹೆಚ್ಚಿರುವ ಕಾಡಾನೆಗಳ ಹಾವಳಿಯಿಂದ ಜನರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೋರಾಟಗಾರರು ಗಮನ ಸೆಳೆದರು. ನಂತರ ಕಾಡಾನೆ ಹಾವಳಿ ಸಮಸ್ಯೆಗೆ ಪರಿಹಾರ ದೊರಕಿಸುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಶಾಂತಲಾ ನೀವು ನಾಲ್ಕು ದಿನಗಳಿಂದ ಹೋರಾಟ ನಡೆಸುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ ನೀವು ನೀಡಿರುವ ಮನವಿ ಪತ್ರದಲ್ಲಿರುವ ಅಂಶಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ನಾಳೆ ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಯಲಿದೆ. ಆದ್ದರಿಂದ ಪ್ರತಿಭಟನೆ ಹಿಂಪಡೆಯಿರಿ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಸಿದ ಜಯ ಕರ್ನಾಟಕ ಸಂಘಟನೆಯ ಹೋರಾಟಗಾರರು ನಾಳೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆದು ಕೈಗೊಳ್ಳುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ನಂತರ ಮಧ್ಯಾಹ್ನ 2:30ಕ್ಕೆ ಧರಣಿ ಹಿಂಪಡೆಯುತ್ತೇವೆ ಎಂದು ಮಾಹಿತಿ ನೀಡಿದರು.