ಅರಸೀಕೆರೆ: ಮನೆಗೆ ಮಾರಿ, ಊರಿಗೆ ಉಪಕಾರಿ, ಇದು ಈಗಿನ ಕಾಲಘಟ್ಟದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಮಾತು. ಹಾಗೆಯೇ ಹುಟ್ಟೂರಿನಿಂದ ಎಲ್ಲ ಗೌರವ ಪಡೆದವರು, ಅದೇ ಊರಿಗೆ ಬೇಕಾದ್ದನ್ನು ಮಾಡಲು, ಬೇಡಿದರೂ ಮನಸ್ಸು ಮಾಡುವುದಿಲ್ಲ ಎಂಬ ಆರೋಪ ಆರೋಪವೂ ಇದೆ.
ಆದರೆ ಇದಕ್ಕೆ ಅಪವಾದ ಎಂಬಂತೆ ಕನ್ನಡ ಚಲನಚಿತ್ರ ರಂಗದ ನಟರಾಕ್ಷಸ ಖ್ಯಾತಿಯ ನಟ ಡಾಲಿ ಧನಂಜಯ್, ತಾವು ಹುಟ್ಟು ಪಡೆದ ಹಳ್ಳಿಯ ಶಾಲೆಯಲ್ಲಿ ಓದದೇ ಇದ್ದರೂ, ತವರೂರಿನ ಶಾಲೆಗೆ ಕಾಯಕಲ್ಪ ನೀಡುತ್ತಿದ್ದಾರೆ. ಅದೂ ತಮ್ಮ ಮದುವೆಯ ಸಾರ್ಥಕದ ಸನ್ನಿವೇಶ, ಸಂಭ್ರಮದಲ್ಲಿ ಈ ಮಾದರಿ ಕೆಲಸ ಮಾಡುತ್ತಿದ್ದಾರೆ.
ಧನಂಜಯ ಹಿನ್ನೆಲೆ: ಡಾಲಿ ಧನಂಜಯ, ತಾಲೂಕಿನ ಕಾಳೇನಹಳ್ಳಿಹಟ್ಟಿಯ ಮನೆ ಮಗ. ಜನ್ಮ ಪಡೆದಿದ್ದು ಇಲ್ಲಿ, ಆದರೆ ವಿದ್ಯಾಭ್ಯಾಸ ಪಡೆದಿದ್ದು ಬೇರೆ ಕಡೆ. ಓದಿ ಉತ್ತಮ ವ್ಯಾಸಂಗ ಪಡೆದು, ಅದೃಷ್ಟವಶಾತ್ ಕನ್ನಡ ಚಿತ್ರರಂಗದಲ್ಲಿ ಉತ್ತಮ್ಮ ಅಭಿನಯದ ಮೂಲಕ ತಮ್ಮದೇ ಛಾಪು ಮೂಡಿಸಿರುವ ಧನಂಜಯ್, ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ.
ಹಾಗಂತ ಅವರು, ತನ್ನ ಖ್ಯಾತಿ, ಜನಪ್ರಿಯತೆಗೆ ತಕ್ಕಂತೆ ಬೇಕಾದವರನ್ನು ತಮ್ಮ ಮದುವೆಗೆ ಆಹ್ವಾನಿಸಿ ಧಾಂ… ಧೂಂ… ಅಂತ ಮದುವೆಯಾಗುತ್ತಿಲ್ಲ. ಆಡಂಬರ ಪ್ರದರ್ಶನ ಮಾಡುತ್ತಿಲ್ಲ. ಬದಲಾಗಿ ವಿವಿಧ ರಾಜಕೀಯ ಪಕ್ಷಗಳ ಹಾಗೂ ವಿವಿಧ ಕ್ಷೇತ್ರಗಳ ಗಣ್ಯ ಮಾನ್ಯರನ್ನು ಆಹ್ವಾನಿಸುವುದರ ಜೊತೆಗೆ
ತಮ್ಮ ಮದುವೆಯ ಸಂದರ್ಭವನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಮಾದರಿ ಆಗುವ ಕೆಲಸ ಮಾಡುತ್ತಿದ್ದಾರೆ.
ಅದೇನೆಂದರೆ ತಮ್ಮೂರಿನ 1-7 ನೇ ತರಗತಿವರೆಗಿನ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿದ್ದಾರೆ. ಶಾಲೆಯಲ್ಲಿ ಹಾಲಿ 80 ಮಕ್ಕಳಿದ್ದಾರೆ. ತಮ್ಮ ಮದುವೆಯನ್ನು ಅರ್ಥಪೂರ್ಣಗೊಳಿಸಲು ಇಡೀ ಶಾಲೆಗೆ ಕಾಯಕಲ್ಪ ನೀಡುವ ಮೂಲಕ ಸರ್ಕಾರಿ ಶಾಲೆ ಉಳಿಸಲು ಮುಂದಾಗಿದ್ದಾರೆ.
ಇಡೀ ಶಾಲೆಯ ನೆಲಕ್ಕೆ ಟೈಲ್ಸ್, ಬಣ್ಣಮಾಸಿದ ಶಾಲೆಯ ಎಲ್ಲ ಗೋಡೆಗಳಿಗೆ ಸಂಪೂರ್ಣ, ಬಿರುಕು ಬಿಟ್ಟಿದ್ದ ಗೋಡೆ, ಅಂತಸ್ತಿಗೆ ಚುರಕಿ, ಗೇಟ್ ದುರಸ್ತಿ, ಶಿಕ್ಷಕರ ಕೊಠಡಿಗೆ ಹೊಸ ರೂಪ, ಶೌಚಾಲಯಕ್ಕೆ ಸುಸ್ಥಿತಿ, ಅಚ್ಚುಕಟ್ಟು ಅಡುಗೆ ಮನೆ, ಹೀಗೆ ತನ್ನೂರಿನ ಶಾಲೆಗೆ ಹೈಟೆಕ್ ಸ್ಪರ್ಶ ನೀಡುತ್ತಿದ್ದಾರೆ.
ಅಂದಹಾಗೆ ಧನಂಜಯ್ ಅವರ ಮದುವೆ, ಚಿತ್ರದುರ್ಗ ಮೂಲದ ಹೆಸರಾಂತ ವೈದ್ಯೆ ಜೊತೆ ಮುಂದಿನ ತಿಂಗಳು 15 ಮತ್ತು 16 ರಂದು ಮೈಸೂರಿನಲ್ಲಿ ನಡೆಯಲಿದ್ದು, ಅದನ್ನು ಅರ್ಥಪೂರ್ಣ, ಸಾರ್ಥಕಗೊಳಿಸಲು ಸುಮಾರು 200 ಕ್ಕೂ ಹೆಚ್ಚು ಮನೆಗಳಿರುವ ಸ್ವಗ್ರಾಮಕ್ಕೆ ಹಾಗೂ ಶಾಲೆಗೆ ಬೇಕಾದ ಎಲ್ಲ ಸೌಲಭ್ಯ ನೀಡುತ್ತಿದ್ದಾರೆ. ಧನಂಜಯ್ ಅವರ ಮಾದರಿ ಕಾರ್ಯ ಪ್ರತಿಯೊಬ್ಬರಿಗೂ ಮಾದರಿ ಎನಿಸಿದೆ.
ತಾವು ಹುಟ್ಟಿನದ ಊರಿನ ಶಾಲೆಯಲ್ಲಿ ಓದದೇ ಇದ್ದರೂ, ಅದಕ್ಕೀಗ ಹೊಸತನ ಕೊಡಲು ಮುಂದಾಗಿರುವ ಧನಂಜಯ ಅವರ ಪ್ರಯತ್ನಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಶಾಲೆಗೆ ಓವರ್‌ಹೆಡ್ ಟ್ಯಾಂಕ್, ವಾಟರ್ ಫಿಲ್ಟರ್ ಜೊತೆಗೆ ಹಳೆಯ ಅರಳೀಮರದ ಸುತ್ತ ಕಟ್ಟೆ ಕಟ್ಟಿಸುತ್ತಿದ್ದಾರೆ. ಬಲ ಕಳೆದುಕೊಂಡಿದ್ದ ಕಿಟಕಿ, ಕುರ್ಚಿ, ಮೇಜನ್ನೂ ಬದಲಾವಣೆ ಮಾಡಿಸುತ್ತಿದ್ದಾರೆ.
ಇದಕ್ಕಾಗಿ ಲಕ್ಷಾಂತರ ರೂ.ವೆಚ್ಚ ಆಗಿದೆ. ಆ ಬಗ್ಗೆ ಕನ್ನಡದ ನಟ ತಲೆ ಕೆಡಿಸಿಕೊಂಡಿಲ್ಲ. ಎಷ್ಟಾದರೂ ಖರ್ಚಾಗಲಿ, ನಮ್ಮೂರ ಶಾಲೆ ನಾಜೂಕಾಗಿರಬೇಕು. ಆ ಮೂಲಕ ಮಕ್ಕಳ ಹಾಜರಾತಿ ಹೆಚ್ಚಳವಾಗಿ ಸರ್ಕಾರಿ ಶಾಲೆ ಉಳಿಯಬೇಕು ಎಂದು ಸದಾಶಯ ಹೊಂದಿ, ಅದನ್ನು ಅಕ್ಷರಶಃ ಸಾಕಾರಗೊಳಿಸುತ್ತಿದ್ದಾರೆ.