ಪ್ರೈವೆಟ್‌ ಮಾತುಕತೆಗೆ ಕರೆದೊಯ್ದು ಸುಚಿತ್ರಾ ಕುತ್ತಿಗೆ ಕೊಯ್ದಿದ್ದ ಪ್ರೇಮಿಯದ್ದು ಪೂರ್ವಯೋಜಿತ ಸಂಚು; ಪೊಲೀಸ್‌ ತನಿಖೆಯಲ್ಲಿ ಬಹಿರಂಗ

ತಂದೆಯ ಬುದ್ಧಿಮಾತಿಗೆ ಬೆಲೆಕೊಟ್ಟು ಪ್ರೇಮಿಯಿಂದ ಅಂತರ ಕಾಯ್ದುಕೊಂಡಿದ್ದೇ ತಪ್ಪಾಯ್ತು; ಪ್ರೇಮಿಯ ಹುಚ್ಚಾಟಕ್ಕೆ ಯುವತಿ ಜೀವವೇ ಬಲಿ!

ಹಾಸನ: ಕುಂತಿಗುಡ್ಡದಲ್ಲಿ ಗುರುವಾರ ನಡೆದಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಸುಚಿತ್ರಾ ಕೊಲೆ ಪ್ರಕರಣದ ತನಿಖೆ ಆರಂಭಿಸಿರುವ ಪೊಲೀಸರು ಆರೋಪಿ ತೇಜಸ್‌ ಕೊಲೆ ಮಾಡಲು ಸಂಚು ರೂಪಿಸಿಕೊಂಡೇ ಯುವತಿಯನ್ನು ಕಡೇ ಬಾರಿಗೆ ಮಾತನಾಡಿಸುವ ನೆಪದಲ್ಲಿ ಬೈಕ್‌ ನಲ್ಲಿ ಕರೆದೊಯ್ದಿಯ್ದ ಎನ್ನುವ ಸಂಗತಿ ಖಚಿತಪಡಿಸಿಕೊಂಡಿದ್ದಾರೆ.

ನಿನ್ನನ್ನು ಪ್ರೀತಿಸುವುದಿಲ್ಲ, ನನ್ನೊಂದಿಗೆ ಮಾತನಾಡಬೇಡ, ಮೆಸೇಜ್ ಮಾಡಬೇಡ ಎಂದ ಕಾರಣಕ್ಕಾಗಿಯೇ ಹೇಳಿದ್ದಕ್ಕೆ ಕುಪಿತಗೊಂಡ ಪ್ರಿಯಕರ ಮೊದಲೇ ಕೊಲ್ಲುವ ಪ್ಲಾನ್ ಮಾಡಿ ತನ್ನ ದುರುದ್ದೇಶ ಈಡೇರಿಸಿಕೋಂಡಿದ್ದಾನೆ ಎಂಬುದು ಖಾಕಿ ತನಿಖೆಯಿಂದ ತಿಳಿದು ಬಂದಿದೆ. ಅಷ್ಟೇ ಅಲ್ಲ ಕೊಲೆಯಾದ ಸುಚಿತ್ರಾ ಹಾಗೂ ಆರೋಪಿ ತೇಜಸ್ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದುದು ಎರಡೂ ಮನೆಯವರಿಗೂ ತಿಳಿದಿತ್ತು ಎಂಬ ಅಂಶವೂ ಬಯಲಾಗಿದೆ.

ಗೂಡ್ಸ್ ವಾಹನ ಚಾಲಕನ ಮಗಳು:

ಕೊಲೆಯಾದ ಸುಚಿತ್ರಾ ಅವರ ತಂದೆ ಆಲೂರು ತಾಲೂಕು ಕವಳಿಕೆರೆ ಗ್ರಾಮದ ಲೋಕೇಶ್, ನಗರದ ಬಿ.ಟಿ.ಕೊಪ್ಪಲು ೨ನೇ ಕ್ರಾಸ್‌ನ ಮಾಸ್ಟರ್ ಕೃಷ್ಣೇಗೌಡ ಅವರ ಮನೆಯಲ್ಲಿ ಬಾಡಿಗೆದಿದ್ದರು.

ಗೂಡ್ಸ್ ವಾಹನ ಚಾಲಕರಾಗಿರುವ ಲೋಕೇಶ್‌ಗೆ ಸುಶ್ಮಿತಾ ಮತ್ತು ಸುಚಿತ್ರಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು.

ಸುಚಿತ್ರಾ, ಮೊಸಳೆ ಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ೨ನೇ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾಭ್ಯಾಸ ಮಾಡುತ್ತಿದ್ದರು. 6 ತಿಂಗಳಿನಿಂದ ಅದೇ ಕಾಲೇಜಿನಲ್ಲಿ ವಿದ್ಯಾರ್ಥಿ, ಶಂಕರನಹಳ್ಳಿ ಗ್ರಾಮದ ಕೃಷ್ಣೇಗೌಡ ಎಂಬುವರ ಮಗ ತೇಜಸ್ ನೊಂದಿಗೆ ಗೆಳೆತನ ಪ್ರೀತಿಗೆ ತಿರುಗಿತ್ತು. ಇಬ್ಬರೂ ಜತೆಯಾಗಿ ಓಡಾಡುತ್ತಿದ್ದರು ಎನ್ನಲಾಗಿದೆ. ಈ ವಿಚಾರ ತಿಳಿದ ಲೋಕೇಶ್, ಇಬ್ಬರಿಗೂ ಬುದ್ಧಿವಾದ ಹೇಳಿದ್ದರು.

ಅದಾದ ಬಳಿಕ ನ.14 ರಂದು ಸುಚಿತ್ರಾ, ತೇಜಸ್‌ಗೆ ಕರೆ ಮಾಡಿ ನನ್ನನ್ನು ಮಾತನಾಡಿಸಬೇಡ, ಫೋನ್, ಮಸೇಜ್ ಮಾಡೋದು ಬೇಡ ಎಂದು ಹೇಳಿದರೂ ತೇಜಸ್, ಪದೇ ಪದೆ ಮಸೇಜ್ ಮಾಡುತ್ತಿದ್ದಾನೆ ಎಂದು ತಂದೆಗೆ ಹೇಳಿದ್ದಳು. ಇದಕ್ಕೆ ತೇಜಸ್‌ನ ಅಪ್ಪ ಮತ್ತು ಅಮ್ಮನ ಜೊತೆ ಮಾತನಾಡಿ ಸರಿಪಡಿಸುತ್ತೇವೆ, ನೀನು ತಲೆ ಕೆಡಿಸಿಕೊಳ್ಳಬೇಡ ಚೆನ್ನಾಗಿ ಓದು ಅಂತ ಲೋಕೇಶ್ ಮಗಳಿಗೆ ಹೇಳಿದ್ದರು.

ಕೊಲ್ಲಲು ಪ್ಲಾನ್:

ನ.೧೬ ರಂದು ಬೆಳಿಗ್ಗೆ ೧೦ ಗಂಟೆಗೆ ಸುಶ್ಮಿತಾ ಮತ್ತು ಸುಚಿತ್ರಾ ಸಹೋದರಿಯರು ಸಿಟಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಆಟೋದಲ್ಲಿ ಹೊರಟರು. ಬಿಎಸ್‌ಎನ್‌ಎಲ್ ಭವನದ ಹತ್ತಿರ ಆಟೋ ಇಳಿದಾಗ ಅಲ್ಲಿಗೆ ಬೈಕ್‌ನಲ್ಲಿ ಬಂದ ತೇಜಸ್, ಸುಚಿತ್ರ‍್ರಾ ಬಳಿ ಬಂದು ಒಂದು ಸಾರಿ ನನ್ನೊಂದಿಗೆ ಮಾತನಾಡು, ಇನ್ನು ಮುಂದೆ ನಿನ್ನ ತಂಟೆಗೆ ಬರೋದಿಲ್ಲ ಎಂದು ಕೇಳಿ ಕೊಂಡಿದ್ದಾನೆ.

ಅಲ್ಲದೆ ನಿನ್ನ ಜೊತೆ ಖಾಸಗಿಯಾಗಿ ಮಾತನಾಡಿ ಕಳುಹಿಸುತ್ತೇನೆ, ಪ್ಲೀಸ್ ನನ್ನೊಂದಿಗೆ ಬಾ ಎಂದು ವಿನಂತಿಸಿಕೊಂಡು ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಈತನ ಮಾತು ನಂಬಿದ ಸುಚಿತ್ರಾ, ನೀವು ಮನೆಗೆ ಹೋಗು ಎಂದು ಸಹೋದರಿ ಸುಶ್ಮಿತಾಗೆ ಬೈಕ್‌ನಲ್ಲಿ ಹೋಗಿದ್ದಳು.

ಈ ನಡುವೆ ಲೋಕೇಶ್ ಅವರ ಸ್ನೇಹಿತ ಜಯರಾಮೇಗೌಡ ಅಲಿಯಾಸ್ ದೇವೇಂದ್ರ ಎಂಬುವರು ಪೋನ್ ಮಾಡಿ ನಿನ್ನ ಮಗಳು ಸುಚಿತ್ರಾ ಯಾವುದೋ ಹುಡುಗನ ಜೊತೆ ಬೈಕ್‌ನಲ್ಲಿ ಅಗಿಲೆ ಹತ್ತಿರ ಹೋಗುತ್ತಿದ್ದಳು. ಹಿಂದಿನಿAದ ಫಾಲೋ ಮಾಡಿ ಕುಂತಿಗುಡ್ಡದ ಹತ್ತಿರ ಇಬ್ಬರನ್ನೂ  ಮಾತನಾಡಿಸಿದೆ ಎಂದು ಹೇಳಿದ್ದಾರೆ. ಇದರಿಂದ ಗಾಬರಿಗೊಂಡ ಲೋಕೇಶ್ ಹಾಗೂ ಮನೆಯವರು ತಕ್ಷಣ ಆಟೋ ಬಾಡಿಗೆ ಪಡೆದು ಕುಂತಿಗುಡ್ಡಕ್ಕೆ ತೆರಳಿ ದೇವಸ್ಥಾನದ ಕೆಳಭಾಗ ಹೋಗುತ್ತಿದ್ದಾಗ ತೇಜಸ್, ಕೈಯಲ್ಲಿ ಚಾಕು ಹಿಡಿದು ಇಳಿಯುತ್ತಿದ್ದ. ಸುಚಿತ್ರಾ ಎಲ್ಲಿ ಎಂದು ಕೇಳಿದ್ದಕ್ಕೆ ಇನ್ನೊಂದು ರಸ್ತೆಯಲ್ಲಿ ಇಳಿದು ಹೋಗಿದ್ದಾಳೆ ಎಂದು ಸುಳ್ಳು ಹೇಳಿದ್ದಾನೆ.

ಅನುಮಾನ ಹಾಗೂ ಭಯದಿಂದ ದೇವಸ್ಥಾನದ ಕೆಳಭಾಗದ ದಾರಿಯಲ್ಲಿ ಹೋಗುತ್ತಿದ್ದಾಗ ಬಂಡೆಯ ಹತ್ತಿರ ಸುಚಿತ್ರಾ ಅಂಗಾತ ಬಿದ್ದಿದ್ದಳು. ಆ ವೇಳೆಗಾಗಲೇ ಚಾಕು ಇರಿತದಿಂದ ಸುಚಿತ್ರಾ ಮೃತಪಟ್ಟಿದ್ದಳು.