ಸಿಎಂ ಕಾರ್ಯಕ್ರಮಕ್ಕಾಗಿ ಕ್ರಷರ್,‌ ಕ್ವಾರಿಗಳಿಂದ 4ಕೋಟಿ ರೂ. ವಸೂಲಿ; ಸಂಸದ ಪ್ರಜ್ವಲ್ ರೇವಣ್ಣ ಗಂಭೀರ ಆರೋಪ

ಸರ್ಕಾರದಿಂದ ದುಡ್ಡು ಕೊಟ್ಟಿಲ್ಲ, ಹಾಗಾದರೆ ಹಣ ಎಲ್ಲಿಂದ ತಂದಿದ್ದಾರೆ? ಏನಾದರೂ ಚರ್ಚೆ ಮಾಡಲಿ, ಸತ್ಯಾಂಶಗಳನ್ನು ಆಚೆ ಇಡಬೇಕಲ್ಲವೇ?

ಹಾಸನ: ನಗರದಲ್ಲಿ ಶುಕ್ರವಾರ ನಡೆದ ಮುಖ್ಯಮಂತ್ರಿಗಳು ಭಾಗವಹಿಸಿದ್ದ ಕಾರ್ಯಕ್ರಮ ಆಯೋಜಿಸಲು ಕ್ರಷರ್, ಕ್ವಾರಿ ಮಾಲೀಕರು, ಅಧಿಕಾರಿಗಳಿಂದ ಸುಮಾರು ನಾಲ್ಕು ಕೋಟಿ ರೂ. ವಸೂಲಿ ಮಾಡಲಾಗಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಗಂಭೀರ ಆರೋಪ ಮಾಡಿದರು.

ಹೊಳೆನರಸೀಪುರ ತಾಲೂಕಿನ ಮಾವಿನಕೆರೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸರ್ಕಾರಿ ಕಾರ್ಯಕ್ರಮ ಅಂತ ಮಾಡಿದ್ದಾರೆ.
ಮೂರರಿಂದ ನಾಲ್ಕು ಕೋಟಿ ರೂ. ಖರ್ಚಾಗಿದೆ. ಈ‌ ಕಾರ್ಯಕ್ರಮ ನಡೆಸಲು ಸರ್ಕಾರದಿಂದ ದುಡ್ಡು ಕೊಟ್ಟಿಲ್ಲ, ಹಾಗಾದರೆ ಹಣ ಎಲ್ಲಿಂದ ತಂದಿದ್ದಾರೆ? ಏನಾದರೂ ಚರ್ಚೆ ಮಾಡಲಿ, ಸತ್ಯಾಂಶಗಳನ್ನು ಆಚೆ ಇಡಬೇಕಲ್ಲವೇ ಎಂದು ಪ್ರಶ್ನಿಸಿದರು.

ನಾವು 750 ಬಸ್ ಪಂಚಾಯ್ತಿವಾರು ಬಿಟ್ಟಿದ್ದೀವಿ, ಪಿಡಿಓಗಳಿಗೆ ಜನ ಕರೆದುಕೊಂಡು ಬರಲು ಹೇಳಿದ್ದೇವೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚನೆ ಕೊಟ್ಟಿದ್ದೇವೆ ಅಂತ ಡಿಸಿ ಹೇಳ್ತಾರೆ.

ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಯಾರಿಗೆ ಬರ್ತಿಲ್ಲವೋ ಅವರು ಕಾರ್ಯಕ್ರಮಕ್ಕೆ ಬಂದರೆ ಅಲ್ಲಿ ರಿಜಿಸ್ಟ್ರೇಷನ್ ಮಾಡಿ ನಾಲ್ಕು ಸಾವಿರ ರೂಪಾಯಿ ಕೊಡ್ತಾರೆ ಅಂತ ಸ್ವಲ್ಪ ಜನ ಕರೆದುಕೊಂಡು ಬಂದಿದ್ದಾರೆ ಎಂದು ದೂರಿದರು.

ಆದರೂ ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಜನರನ್ನು ಸೇರಿಸಲು ಆಗಿಲ್ಲ. ಇವೆಲ್ಲ ಮಿಷನರಿ ಇಟ್ಟುಕೊಂಡು ಇಪ್ಪತ್ತು ಸಾವಿರ ಜನ ಸೇರಿಸಲು ಆಗಿಲ್ಲ, ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಅಂತ ಕರೆದಿದ್ದರೆ ಹತ್ತು ಸಾವಿರ ಜನ ಸೇರುತ್ತಿರಲಿಲ್ಲ. ಆಡಳಿತ ಪಕ್ಷದ ವಿರೋಧಿ ಅಲೆ ಪ್ರಾರಂಭವಾಗಿದೆ. ಇವತ್ತು ಎಲ್ಲಾ ಕಡೆ ಆ ಚರ್ಚೆ ನಡೆಯುತ್ತಿದೆ ಎಂದರು.

ಸಿಎಂ, ಡಿಸಿಎಂ ಬರೋದು ಬರ್ತಾ ಇರ್ತಾರೆ, ಅದಕ್ಕೆಲ್ಲಾ ನಾವು ತಪ್ಪು ತಿಳಿಯಲು ಆಗುತ್ತಾ? ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಗಟ್ಟಿಯಾಗಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು, ಬಿಜೆಪಿ ಪಕ್ಷದ ಮುಖಂಡರು ಗಟ್ಟಿಯಾಗಿ ಈ ಬಾರಿ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಮಂತ್ರಿ ಮಾಡ್ತೀವಿ. ಎಲ್ಲರೂ ನನ್ನ ಬೆಂಬಕ್ಕೆ ನಿಂತು ಕೆಲಸ‌ ಮಾಡುತ್ತಿದ್ದಾರೆ. ದೇವೇಗೌಡರ ಆಶೀರ್ವಾದ, ವಿಶ್ವಾಸ, ಶ್ರಮದ ಮೇಲೆ ನಾವು ಕೆಲಸ ಮಾಡುತ್ತಿದ್ದೇವೆ. ಖಂಡಿತವಾಗಿ ಒಳ್ಳೆಯ ದಿನಗಳು ಬರುತ್ತವೆ ಎಂದರು.

ಡಿಸಿಯವರು ಚುನಾವಣೆ ಸಂದರ್ಭದಲ್ಲಿ ಯಾವುದೇ ಪಕ್ಷಕ್ಕೆ ಸೀಮಿತವಾಗದೆ ಪಾರದರ್ಶಕವಾಗಿ ಕೆಲಸ‌ ಮಾಡಬೇಕು
-ಪ್ರಜ್ವಲ್ ರೇವಣ್ಣ ಸಂಸದ