ಹಾಸನ: ಕೊಡಗು ಜಿಲ್ಲೆ, ಸುಂಟಿಕೊಪ್ಪ ಸಮೀಪದ ಗರಗಂದೂರು ಬಳಿ ಕಾವೇರಿ ನದಿಯಲ್ಲಿ ಹಾಸನ ಮೂಲದ ಯುವಕನ ಶವಪತ್ತೆಯಾಗಿದೆ.
ಹಾಸನ ಹೊರವಲಯದ ಕಂದಲಿ ಗ್ರಾಮದ ಹೇಮಂತ್‌ಕುಮಾರ್ (28) ಸಾವನ್ನಪ್ಪಿರುವ ಯುವಕ. ಆತ ವಿವಿಧ ಸ್ಥಳೀಯ ವಾಹಿನಿಗಳಲ್ಲಿ ವಿಡಿಯೋ ಎಡಿಟರ್ ಆಗಿ ಸೇವೆ ಸಲ್ಲಿಸಿದ್ದ.
ನಿನ್ನೆ ಮಧ್ಯಾಹ್ನ ಮನೆಯಿಂದ ಹೊರಗೆ ಹೋಗಿದ್ದ ಹೇಮಂತ್‌ಕುಮಾರ್, ನಿನ್ನೆ ರಾತ್ರಿ ತಾಯಿಯ ಜತೆ ಫೋನ್‌ನಲ್ಲಿ ಮಾತನಾಡಿದ್ದನು. ಆನಂತರ ಆತನ ಎರಡೂ ಮೊಬೈಲ್ ಗಳೂ ಸ್ವಿಚ್ಚಾಫ್ ಆಗಿದ್ದವು.
ಆತನ ತಾಯಿ ಅನ್ನಪೂರ್ಣ ಇಂದು ಬೆಳಿಗ್ಗೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ತಮ್ಮ ಪುತ್ರ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಹೇಮಂತ್‌ಕುಮಾರ್‌ಗಾಗಿ ಹುಡುಕಾಟ ನಡೆಸಿದ್ದ ಹಾಸನ ನಗರ ಠಾಣೆ ಪೊಲೀಸರು ಆತನ ಮೊಬೈಲ್ ನಂಬರ್ ಆಧರಿಸಿ ಲೊಕೇಷನ್ ಪತ್ತೆಹಚ್ಚಿದಾಗ ಸುಂಟಿಕೊಪ್ಪ ಬಳಿ ಆತನ ಮೊಬೈಲ್ ಗಳು ಸ್ವಿಚ್ ಆಫ್ ಆಗಿದ್ದವು.
ಸ್ಥಳಕ್ಕೆ ತೆರಳಿ ಹುಡುಕಾಟ ನಡೆಸಿದ್ದ ಪೊಲೀಸರಿಗೆ ಸಂಜೆ ಕಾವೇರಿ ನದಿಯಲ್ಲಿ ತೇಲುತ್ತಿದ್ದ ಹೇಮಂತ್‌ಕುಮಾರ್ ಶವ ಪತ್ತೆಯಾಗಿದೆ. ಆತನ ಶವ ದೊರೆತ ಒಂದು ಕಿಲೋಮೀಟರ್ ದೂರದಲ್ಲಿ ಆತನ ಬೈಕ್ ಹಾಗೂ ಜರ್ಕಿನ್ ಪತ್ತೆಯಾಗಿವೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಕುಶಾಲನಗರ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.