ಹಾಸನ: ಅತಿಯಾಗಿ ಮದ್ಯ ಸೇವಿಸಿ ನಾಲೆ ಪಕ್ಕ ಮಲಗಿದ್ದ ಯುವಕನೊಬ್ಬ ಗಾಢ ನಿದ್ರೆಯಲ್ಲಿ ನೀರು ಹರಿಯುತ್ತಿದ್ದ ನಾಲೆಗೆ ಬಿದ್ದು ಮೃತಪಟ್ಟಿದ್ದು, ಇಂದು ಹೊಳೆನರಸೀಪುರ ತಾಲೂಕು ಸೋಮನಹಳ್ಳಿ ಕಾವಲು ಬಳಿ ಆತನ ಶವ ಪತ್ತೆಯಾಗಿದೆ.
ರಘುವೀರ್ (33) ಮೃತಪಟ್ಟ ಯುವಕ.ಹೊಳೆನರಸೀಪುರ ತಾಲ್ಲೂಕಿನ, ಓಡನಹಳ್ಳಿ ಗ್ರಾಮದವನಾದ ಆತ ಮದುವೆಯಾಗಲು ಹೆಣ್ಣು ಸಿಗದಿದ್ದಕ್ಕೆ ಮನನೊಂದಿದ್ದ. ಅಲ್ಲದೆ ಕೆಲ ದಿನಗಳ ಹಿಂದೆ ಆತನ ತಾಯಿಯೂ ಮೃತಪಟ್ಟಿದ್ದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು.
ಎರಡು ದಿನಗಳ ಹಿಂದೆ ಮದ್ಯ ಸೇವಿಸುತ್ತಾ ಹರಿಯುವ ಹೇಮಾವತಿ ನಾಲೆಯ ದಡದಲ್ಲಿ ರಘುವೀರ್ ಮಲಗಿದ್ದ. ಗಾಢ ನಿದ್ರೆಯಲ್ಲೇ ಆತ ನೀರಿಗೆ ಬಿದ್ದಿದ್ದ. ಆದರೆ ಆತನ ಶವ ಪತ್ತೆಯಾಗಿರಲಿಲ್ಲ. ಸ್ಥಳೀಯರ ಮಾಹಿತಿ ಆಧರಿಸಿ ಪೊಲೀಸರು ಶವಕ್ಕಾಗಿ ಹುಡುಕಾಟ ನಡೆಸಿದ್ದರು.
ಇಂದು ಸೋಮನಹಳ್ಳಿ ಕಾವಲು ಬಳಿ ನಾಲೆಯಲ್ಲಿ ಶವ ತೇಲುತ್ತಿರುವುದನ್ನು ಕಂಡು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಹಳ್ಳಿ ಮೈಸೂರು ಠಾಣೆ ಪೊಲೀಸರು ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.