ಹಾಸನ: ನಗರದ ಬಿ.ಎಂ. ರಸ್ತೆಯ ಖಾಸಗಿ ಹೋಟೆಲ್ ಗೇಟ್ ಬಳಿ ನಿನ್ನೆ ತಡರಾತ್ರಿ ಮಾಜಿ ಪ್ರೇಯಸಿಯೊಬ್ಬಳು ಯುವಕನೊಬ್ಬನಿಗೆ ಚಾಕುವಿನಿಂದ ದಾಳಿ ನಡೆಸಿದ್ದು, ಗಾಯಾಳು ಸ್ಥಿತಿ ಗಂಭೀರವಾಗಿದೆ.
ಹಾಸನ ತಾಲ್ಲೂಕಿನ ಎ.ಗುಡುಗನಹಳ್ಳಿಯ ನಿವಾಸಿ, ಹಾರ್ಡ್‌ವೇರ್ ಮತ್ತು ಪ್ಲೈವುಡ್ ಅಂಗಡಿ ಮಾಲೀಕ ಮನುಕುಮಾರ್ (25)ನನ್ನು ಆತನ ಮಾಜಿ ಪ್ರೇಯಸಿ ಭವಾನಿ ಚಾಕುವಿನಿಂದ ಇರಿಳಿದಿದ್ದಾಳೆ. ಗಾಯಾಳು ಹಿಮ್ಸ್ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನುಕುಮಾರ್ ಮತ್ತು ಭವಾನಿ ಕಾಲೇಜು ದಿನಗಳಿಂದ ಪರಿಚಯಸ್ಥರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಕೆಲ ದಿನಗಳಿಂದ ದೂರವಾಗಿದ್ದ ಈ ಜೋಡಿ ಹೊಸ ವರ್ಷಾಚರಣೆಯ ದಿನ ಮತ್ತೆ ಭೇಟಿಯಾದದ್ದು ದುರಂತಕ್ಕೆ ಕಾರಣವಾಯಿತು.
ಘಟನೆ ವಿವರ:
ನಿನ್ನೆ ರಾತ್ರಿ ಸ್ನೇಹಿತರೊಂದಿಗೆ ಹೊಸ ವರ್ಷಾಚರಣೆಗೆ ಖಾಸಗಿ ಹೋಟೆಲ್‌ಗೆ ಬಂದಿದ್ದ ಮನುಕುಮಾರ್ ಗೆ ಭವಾನಿ ಹಲವಾರು ಬಾರಿ ಫೋನ್ ಕರೆ ಮಾಡುತ್ತಿದ್ದಳು. ಆದರೆ ಮನು ಉತ್ತರಿಸಿರಲಿಲ್ಲ ಎನ್ನಲಾಗಿದೆ.
ತಡರಾತ್ರಿ 12.30ರ ಸುಮಾರಿಗೆ ಭವಾನಿ ಹೋಟೆಲ್ ಬಳಿ ಬಂದಿದ್ದು, ಬೇರೆಯವರು ಬಳಸಿ ಎಸೆದಿದ್ದ ಪಾಸ್ ಬಳಸಿ ಒಳ ಪ್ರವೇಶಿಸಿದ್ದಾಳೆ. ಅಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಯಿತು.
ಜಗಳ ತೀವ್ರಗೊಂಡಾಗ, ಅಲ್ಲಿದ್ದ ಮನುಕುಮಾರ್ ಸ್ನೇಹಿತರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರು. ಈ ವೇಳೆ ಭವಾನಿ ತಮ್ಮ ಬಳಿಯಿದ್ದ ಚಾಕುವಿನಿಂದ ಮನುಕುಮಾರ್ ಅವರನ್ನು ಇರಿದು ಸ್ಥಳದಿಂದ ಪರಾರಿಯಾದಳು.
ಪೊಲೀಸರಿಂದ ಸ್ಥಳ ಪರಿಶೀಲನೆ:
ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಪತ್ತೆಹಚ್ಚಲು ತನಿಖೆ ಆರಂಭವಾಗಿದೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.