ಚನ್ನರಾಯಪಟ್ಟಣ: ಮಂಡ್ಯ ಜಿಲ್ಲೆ ಹಲಗೂರು ಸಮೀಪದ ಮುತ್ತತ್ತಿಯ ಕಾವೇರಿ ನದಿಯಲ್ಲಿ ಶುಕ್ರವಾರ ಸಂಜೆ ಚನ್ನರಾಯಪಟ್ಟಣದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಚನ್ನರಾಯಪಟ್ಟಣ ತಾಲ್ಲೂಕು ಕಸಬ ಹೋಬಳಿ ಡೇರಿ ಶೆಟ್ಟಿಹಳ್ಳಿ ಗ್ರಾಮದ ಹರೀಶ್ (28) ಮೃತಪಟ್ಟ ದುರ್ದೈವಿ.
ವೃತ್ತಿಯಲ್ಲಿ ಕಾರು ಚಾಲಕರಾಗಿದ್ದ ಅವರು ಶುಕ್ರವಾರ ಬೆಂಗಳೂರು ಹಾಗೂ ಶೆಟ್ಟಿಹಳ್ಳಿ ಗ್ರಾಮದ ಸ್ನೇಹಿತರೊಂದಿಗೆ ಮುತ್ತತ್ತಿರಾಯ ದೇವರ ದರ್ಶನಕ್ಕೆ ತೆರಳಿದ್ದರು.
ಪೂಜೆ ನಂತರ ಕಾವೇರಿ ನದಿಯಲ್ಲಿ ಈಜಲು ಹೋಗಿ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಕುಟುಂಬಕ್ಕೆ ಆಸರೆಯಾಗಿದ್ದ ಹರೀಶ್ ಸಾವು ತುಂಬಲಾರದ ನಷ್ಟವಾಗಿದ್ದು. ಕುಟುಂಬದವರು ದುಃಖದಲ್ಲಿ ಮುಳುಗಿದ್ದಾರೆ.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.