ಹಾಸನ: ತುಂಡಾದ ವಿದ್ಯುತ್ ತಂತಿ ತುಳಿದು ಮಹಿಳೆ ಸಾವು

ಹಾಸನ: ಆಲೂರು ತಾಲ್ಲೂಕಿನ ಧರ್ಮಪುರಿ ಗ್ರಾಮದಲ್ಲಿ ಬಹಿರ್ದೆಸೆಗೆ ಹೋಗಿದ್ದ ಮಹಿಳೆ ಒಬ್ಬರು ಆಕಸ್ಮಿಕವಾಗಿ ತುಂಡಾದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

65 ವರ್ಷದ ತಾಯಮ್ಮ ಮೃತ‌‌ ಮಹಿಳೆ. ಅವರ ಮನೆ ಪಕ್ಕದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಅದನ್ನು ತಿಳಿಯದ ಅವರು ಬೆಳಿಗ್ಗೆ ಬಹಿರ್ದೆಸೆಗೆ ತೆರಳುವಾಗ ವಿದ್ಯುತ್ ತಂತಿಯನ್ನು ತುಳಿದಿದ್ದಾರೆ. ಇದರಿಂದ ವಿದ್ಯುತ್ ಶಾಕ್‌ಗೆ ಒಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆ ಕುರಿತು ಮಾಹಿತಿ ತಿಳಿದ ನಂತರ ಸ್ಥಳಕ್ಕೆ ಆಲೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.