ಸಕಲೇಶಪುರ, ಏಪ್ರಿಲ್ 14: ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸೋಮವಾರ ರಾತ್ರಿ ನಡೆದ ಹಿಟ್ ಅಂಡ್ ರನ್ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ವಿಡಿಯೋ ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
https://www.instagram.com/reel/DIc5f6oyMD5/?igsh=MW15ZGtnZGlmcnl2Nw==
ಹಲಸುಲಿಗೆ ಗ್ರಾಮದ ಗುಲಾಬಿ (32) ಮೃತಪಟ್ಟ ಮಹಿಳೆ. ಅವರು, ಮಕ್ಕಳು ಅಳುತ್ತಿದ್ದರಿಂದ ಚಾಕ್ಲೇಟ್ ಮತ್ತು ಬಿಸ್ಕೆಟ್ ತರಲು ಡಿವೈಡರ್ ದಾಟಿ ಹೆದ್ದಾರಿ ಬದಿಯ ಅಂಗಡಿಗೆ ತೆರಳುತ್ತಿದ್ದರು. ಈ ವೇಳೆ, ವೇಗವಾಗಿ ಬಂದ ಇನೋವಾ ಕಾರೊಂದು (KA-05-AH-0576) ಗುಲಾಬಿ ಅವರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಮಹಿಳೆ ಹಾರಿ ಬಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಆಘಾತಕಾರಿಯೆಂದರೆ, ಡಿಕ್ಕಿ ಹೊಡೆದ ಕಾರಿನ ಚಾಲಕ ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದು, ಅಮಾನವೀಯ ವರ್ತನೆ ತೋರಿದ್ದಾನೆ.
ಈ ದುರ್ಘಟನೆಯ ಭಯಾನಕ ದೃಶ್ಯ ಹೆದ್ದಾರಿ ಬದಿಯ ಹೋಟೆಲ್ ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರ ತನಿಖೆಗೆ ಸಹಕಾರಿಯಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕಾರಿನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನ ಪತ್ತೆಗೆ ಬಲೆ ಬೀಸಿದ್ದಾರೆ.