ಸಕಲೇಶಪುರ; ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆಯ ಬರ್ಬರ ಹತ್ಯೆ

ಹಾಸನ : ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸಕಲೇಶಪುರ ತಾಲ್ಲೂಕಿನ, ಇಬ್ಬಡಿ ಕೊಣ್ಣೂರು ಗ್ರಾಮದ ಬಳಿ ನಡೆದಿದೆ.

ಅನಿತಾ(35) ಕೊಲೆಯಾದ ಮಹಿಳೆ. ನಿನ್ನೆ ಬೆಳಗ್ಗೆ ಟಿಫನ್ ಬಾಕ್ಸ್‌ನಲ್ಲಿ ಊಟ ತುಂಬಿಕೊಂಡು ಗದ್ದೆ ಕೆಲಸಕ್ಕೆ ತೆರಳಿದ್ದ ಅನಿತಾ ಮನೆಗೆ ಮರಳಿಲ್ಲ ಎಂದು ಆಕೆಯ ಪತಿ ಚಂದ್ರಶೇಖರ್ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಅನಿತಾಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಹೊಳೆ ಸಾಲಿನಲ್ಲಿ ಅನಿತಾ ಮೃತದೇಹ ಪತ್ತೆಯಾಗಿದೆ. ಹಂತಕ ಆಕೆಯನ್ನು ಭೀಕರವಾಗಿ ಕೊಚ್ಚಿ ಕೊಲೆಗೈದಿದ್ದಾನೆ.

ಹನ್ನೆರಡು ವರ್ಷದ ಹಿಂದೆ ಇಬ್ಬಡಿ ಕೊಣ್ಣೂರು ಗ್ರಾಮದ ಚಂದ್ರಶೇಖರ ಜೊತೆ ವಿವಾಹವಾಗಿದ್ದ ಹೆಬ್ಬಸಾಲೆ ಗ್ರಾಮದ ಅನಿತಾ ಅವರನ್ನು ಅಕ್ರಮ ಸಂಬಂಧ ಆರೋಪದಲ್ಲಿ ಆಕೆಯ ಪತಿಯೇ ಕೊಂದಿರುವ ಶಂಕೆ ವ್ಯಕ್ತವಾಗಿದೆ.

ಎರಡು ವರ್ಷ ಹಿಂದೆ ಜಮೀನು ವಿಚಾರವಾಗಿ ಒಡಹುಟ್ಟಿದ ಅಣ್ಣನ ಪತ್ನಿಯನ್ನೇ ಕೊಲೆಗೈದಿದ್ದ ಪ್ರಕರಣದಲ್ಲಿ ಚಂದ್ರಶೇಖರ್ ಆರೋಪಿಯಾಗಿದ್ದಾನೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಕಲೇಶಪುರ ನಗರಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.