ಹಾಸನ: ಬೇಲೂರು ತಾಲ್ಲೂಕಿನ ಲಕ್ಕುಂದ ಗ್ರಾಮದಲ್ಲಿ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಬೈಕ್ ಮೇಲೆ ಏಕಾಏಕಿ ಕಾಡಾನೆ ದಾಳಿ ಮಾಡಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಚಂದ್ರೇಗೌಡ (58) ಹಾಗೂ ಪೂರ್ಣಿಮಾ (25) ಎಂಬುವವರು ಗಾಯಗೊಂಡಿದ್ದು, ಪೂರ್ಣಿಮಾ ಎಂಟು ತಿಂಗಳ ಗರ್ಭಿಣಿ. ಚಂದ್ರೇಗೌಡ ಅವರು ಆಸ್ಪತ್ರೆಗೆಂದು ಪೂರ್ಣಿಮಾ ಅವರನ್ನು ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಕಾಡಾನೆ ದಾರಿ ಮಧ್ಯೆ ದಾಳಿ ನಡೆಸಿದೆ. ಬೈಕ್‌ಸಹಿತ ಇಬ್ಬರನ್ನೂ ಸೊಂಡಲಿನಿಂದ ಎತ್ತಿ ಬೀಸಾಡಿದೆ ಎನ್ನಲಾಗಿದೆ.
ಗರ್ಭಿಣಿ ಮಹಿಳೆ ಗಟ್ಟಿಯಾಗಿ ಕಿರುಚಾಡಿದ ನಂತರ ಕಾಡಾನೆ ಕಾಡಿನೊಳಕ್ಕೆ ಹಿಂತಿರುಗಿದೆ. ಗಾಯಗೊಂಡವರನ್ನು ತಕ್ಷಣವೇ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆಯುತ್ತಿದೆ.
ಒಂದೇ ದಿನದಲ್ಲಿ ಬೇಲೂರು ತಾಲ್ಲೂಕಿನಲ್ಲಿ ಎರಡು ಕಾಡಾನೆ ದಾಳಿ ವರದಿಯಾಗಿದ್ದು, ಈ ದಾಳಿಗಳಲ್ಲಿ ಒಟ್ಟು ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಗಾಯಗೊಂಡಿದ್ದಾರೆ.