ಸಕಲೇಶಪುರ : ಕಾಡಾನೆಯೊಂದು ಮನೆಯ ಮೇಲೆ ವಿದ್ಯುತ್ ಕಂಬವನ್ನೇ ಉರುಳಿಸಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಬೆಳಗೋಡು ಹೋಬಳಿ ಶಿಡಗಳಲೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಲ್ಲಿಕಾರ್ಜುನ್ ಎಂಬುವವರ ಮನೆಯ ಮುಂಭಾಗ ಹಾದು ಹೋಗಿರುವ 440 ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ತಂತಿ ಕಂಬವನ್ನು ಉರುಳಿಸಿದೆ.
ಇಂದು ಮುಂಜಾನೆ ಆಹಾರ ಅರಸಿ ಶಿಡಗಳಲೆ ಗ್ರಾಮಕ್ಕೆ ಬಂದಿರುವ ಕಾಡಾನೆ ಮನೆಯ ಮುಂದೆ ಇದ್ದ ವಿದ್ಯುತ್ ಕಂಬವನ್ನು ಉರುಳಿಸಿದೆ.
ಕಂಬ ಮನೆಯ ಮೇಲೆ ಬೀಳುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಭಾರಿ ದುರಂತವೊಂದು ತಪ್ಪಿದಂತಾಗಿದೆ.
ಕಳೆದ 15 ದಿನಗಳಿಂದ ಹೆಬ್ಬನಹಳ್ಳಿ, ಹೊಸಕೊಪ್ಪಲು, ಮಾಸುವಳ್ಳಿ ಗ್ರಾಮ ಸುತ್ತಲು ಕಾಡಾನೆಗಳ ಹಿಂಡು ಸಂಚರಿಸುತ್ತಿದ್ದು ಸ್ಥಳೀಯರು ಭಯಭೀತರಾಗಿದ್ದಾರೆ. ಮಲ್ಲಿಕಾರ್ಜುನ ಅವರ ಮನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.