ವಿಡಿಯೋ ನೋಡಿ; ಘೀಳಿಡುತ್ತಾ ಅಟ್ಟಾಡಿಸಿದ ಕಾಡಾನೆ ಕೆಫೆಟೇರಿಯಾ ಆವರಣಕ್ಕೂ ನುಗ್ಗಿತು; ಚೆಲ್ಲಾಪಿಲ್ಲಿಯಾದ‌ ಜನರ ಜೀವ ಉಳಿದಿದ್ದೇ ಅದೃಷ್ಟ!

ವಿಡಿಯೋ ಮಾಡುತ್ತಿದ್ದವರ ಕಿರುಚಾಟದಿಂದ ಕೆರಳಿದ ಆನೆ

ಹಾಸನ: ಕಾಡಾನೆಯೊಂದು ಘೀಳಿಡುತ್ತಾ
ಸಿಕ್ಕಸಿಕ್ಕವರನ್ನೆಲ್ಲಾ ಅಟ್ಟಾಡಿಸಿಕೊಂಡು ಕೆಫೆಟೇರಿಯಾದ ಆವರಣಕ್ಕೆ ನುಗ್ಗಿ ಜನರು ಜೀವ ಕೈಯ್ಯಲ್ಲಿ ಹಿಡಿದು ಓಡುವಂತೆ ಮಾಡಿದ ಘಟನೆ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಚೀಕನಹಳ್ಳಿ-ಕೈಮರ ರಸ್ತೆಯಲ್ಲಿ ನಡೆದಿದೆ.

ಗುಂಪಿನಿಂದ ಬೇರ್ಪಟ್ಟಿರುವ ಹೆಣ್ಣಾನೆಯೊಂದು ಕಾಫಿತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ ದಾಟುತ್ತಿದ್ದ ವೇಳೆ ಕೆಲ ಯುವಕರು ರಸ್ತೆಯಲ್ಲಿ ವಿಡಿಯೋ ಮಾಡುತ್ತಾ ಕಿರುಚಾಡುತ್ತಿದ್ದರು.

ಇದರಿಂದ ಕೆರಳಿದ ಹೆಣ್ಣಾನೆ ರಸ್ತೆಯಲ್ಲಿ ನಿಂತಿದ್ದ ಜನರ ಕಡೆಗೆ ನುಗ್ಗಿದ್ದು ಜನರು ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದರು. ಕೆಲವರು ಚೀಕನಹಳ್ಳಿ-ಕೈಮರ ರಸ್ತೆ ಪಕ್ಕದಲ್ಲಿರುವ ಗ್ರೋವರ್ಸ್ ಕೆಫೆಗೆ ಒಳಗೆ ಹೋಗಿದ್ದಾರೆ.

ಕಾಡಾನೆಯು ಜನರನ್ನು ಅಟ್ಟಿಸಿಕೊಂಡು ಬಂದು ಕೆಫೆಟೇರಿಯಾ ಆವರಣಕ್ಕೆ ನುಗ್ಗಿದ್ದು, ಕೆಫೆಗೆ ಬಂದಿದ್ದ ಕೆಲವರು ಅಲ್ಲಿ ಪಾರ್ಕಿಂಗ್ ಮಾಡಿದ್ದ ಕಾರಿನೊಳಗೆ ಹೋಗಿ ಕುಳಿತರೆ, ಇನ್ನೂ ಕೆಲವರು ಕಾಫಿ ಕುಡಿಯುವುದನ್ನು ಬಿಟ್ಟು ಕೆಫೆ ಒಳಗೆ ಓಡಿ ಹೋಗಿ ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡು ನಿಟ್ಟುಸಿರು ಬಿಟ್ಟಿದ್ದಾರೆ.

ಜನರನ್ನು ಅಟ್ಟಾಡಿಸಿದ ನಂತರ ಕೆಫೆಟೇರಿಯಾ ಪಕ್ಕದಲ್ಲಿದರುವ ಕಾಫಿ ತೋಟದಲ್ಲಿ ಬೀಡುಬಿಟ್ಟಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ.

ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ಕಾಡಾನೆ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ವಿಫಲವಾಗಿದ್ದು, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಡಾನೆಯ ವಿಡಿಯೋ ಸಿಸಿಟಿವಿ ಹಾಗೂ ಯುವಕರ ಮೊಬೈಲ್‌ನಲ್ಲಿ ಸೆರೆಯಾಗಿದೆ.