ಹಾಸನ, ಫೆಬ್ರವರಿ 11: ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮತ್ತೊಮ್ಮೆ ಭೀತಿ ಹುಟ್ಟಿಸಿದೆ. ಬೇಲೂರು ತಾಲ್ಲೂಕಿನ ಲಿಂಗಾಪುರ ಗ್ರಾಮದಲ್ಲಿ ಒಂಟಿ ಸಲಗ ಸೋಲಾರ್ ತಂತಿ ಬೇಲಿಯನ್ನು ಮುರಿದು ಕಾಫಿ ತೋಟದೊಳಗೆ ನುಗ್ಗಿದೆ.
ಕಾಫಿ ತೋಟಗಳ ನಡುವಿನ ಈ ಗ್ರಾಮದಲ್ಲಿ, ದೈತ್ಯಾಕಾರದ ಕಾಡಾನೆ ನೂರಾರು ವಾಹನಗಳು ಸಂಚರಿಸುವ ಮುಖ್ಯ ರಸ್ತೆಯನ್ನು ನಿಧಾನವಾಗಿ ದಾಟಿದೆ. ಈ ಸಂದರ್ಭ, ವಾಹನ ಸವಾರರು ತಮ್ಮ ವಾಹನಗಳನ್ನು ತಕ್ಷಣವೇ ನಿಲ್ಲಿಸಿ ಆತಂಕದ ಕಾದು ನಿಂತರು. ರಸ್ತೆ ದಾಟಿದ ಕಾಡಾನೆ, ತೋಟದ ಕಡೆ ಚಲಿಸಿ, ಕರಂಟ್ ಶಾಕ್ ತಪ್ಪಿಸಿಕೊಳ್ಳಲು ತನ್ನ ಕಾಲಿನಿಂದ ಸೋಲಾರ್ ತಂತಿಬೇಲಿಯ ಕಂಬವನ್ನು ತುಳಿದು ಮುರಿದು ಹಾಕಿತು. ಬಳಿಕ, ಗೇಟ್ ಒಡೆದು ತೋಟದೊಳಗೆ ಪ್ರವೇಶಿಸಿ ಅಲ್ಲಿ ಬೀಡು ಬಿಟ್ಟಿದೆ.
ಸ್ಥಳೀಯರು ಈ ಅಚ್ಚರಿಯ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಕಾಫಿ ತೋಟದ ಮಾಲೀಕ, ಕಾಡಾನೆಗಳಿಂದ ರಕ್ಷಣೆಗಾಗಿ ಸೋಲಾರ್ ಬೇಲಿಯನ್ನು ಅಳವಡಿಸಿದ್ದರೂ, ಕಾಡಾನೆ ಅದನ್ನು ಭೇದಿಸುವ ಯುಕ್ತಿ ತೋರಿಸಿರುವುದು ಅಚ್ಚರಿ ಮೂಡಿಸಿದೆ.
ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆ, ಅರಣ್ಯ ಇಲಾಖೆ ಮತ್ತು ಕ್ಷಿಪ್ರ ಕಾರ್ಯಪಡೆ (ETF) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ತೋಟದೊಳಗೆ ಉಳಿದಿರುವ ಈ ಒಂಟಿ ಸಲಗವನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಓಡಿಸುವ ಕ್ರಮ ಕೈಗೊಳ್ಳಲಾಗುತ್ತಿದೆ.