ನಾಲೆಗೆ ಹಾರಿ ಪ್ರಾಣ ತ್ಯಾಗ ಮಾಡಿದ ಸಂತ್ರಸ್ತ ರೈತ

ಹಾಸನ: ಎತ್ತಿನಹೊಳೆ ಯೋಜನೆಗೆ ಭೂಮಿ ಕಳೆದುಕೊಂಡ ಸಂತ್ರಸ್ತರೊಬ್ಬರಿಗೆ ಸರ್ಕಾರ ಪರಿಹಾರ ನೀಡದೇ ಸತಾಯಿಸಿದ್ದರಿಂದ ಮನನೊಂದು ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೇಲೂರು ತಾಲ್ಲೂಕು ಮಾದೀಹಳ್ಳಿ ಹೋಬಳಿ ವಡ್ಡರಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದ್ದು, ಇಂದು ಶವ ಪತ್ತೆಯಾಗಿದೆ.

ರೈತ ರಂಗಸ್ವಾಮಿ (64) ಮೃತದೇಹ ನಾಲೆಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಶವ ಹೊರ ತೆಗೆಸುತ್ತಿದ್ದಾರೆ.

ಶನಿವಾರ ತನಗೆ ನಿಗದಿಯಾಗಿರುವ ಭೂ ಪರಿಹಾರ ನೀಡುವಂತೆ ಎತ್ತಿನಹೊಳೆ ಯೋಜನೆಯ ಸಹಾಯಕ ಇಂಜಿನಿಯರ್ ಜತೆ ಜಗಳವಾಡಿದ್ದ ರಂಗಸ್ವಾಮಿ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿ ಅಲ್ಲಿಂದ ತೆರಳಿದ ನಂತರ ನಾಪತ್ತೆಯಾಗಿದ್ದರು. ಇಂದು ಅವರ ಮೃತದೇಹ ಪತ್ತೆಯಾಗಿದೆ.

ರಂಗಸ್ವಾಮಿ ಅವರ 1 ಎಕರೆ 32 ಗುಂಟೆ ಕೃಷಿ ಜಮೀನು ಎತ್ತಿನಹೊಳೆ ಯೋಜನೆಗೆ ಸ್ವಾಧೀನವಾಗಿದ್ದು ಅವರಿಗೆ ನಿಗದಿಯಾಗಿದ್ದ ಭೂ ಪರಿಹಾರ ಬಿಡುಗಡೆ ಆಗಿರಲಿಲ್ಲ.

ಪರಿಹಾರದ ಹಣ ನಂಬಿ ಬೇರೆಡೆ ಸಾಲ ಮಾಡಿದ್ದ ರೈತನಿಗೆ ಸಾಲಕೊಟ್ಟವರು ವಾಪಸ್ ಕೊಡುವಂತೆ ಕೇಳಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಪದೇ ಪದೆ ಅವರು ಯೋಜನಾ ಕಚೇರಿಗೆ ತೆರಳಿ ಅಧಿಕಾರಿಗಳ ಜತೆ ಜಗಳವಾಡುತ್ತಿದ್ದರು. ಯೋಜನೆಯ ಇಂಜಿನಿಯರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ನೀಡದ್ದರಿಂದ ಅವರಿಗೆ ಪರಿಹಾರ ವಿತರಿಸಿರಲಿಲ್ಲ ಎಂದು ಮೃತನ ಸಂಬಂಧಿಕರು ದೂರಿದ್ದಾರೆ.

ಎತ್ತಿನಹೊಳೆ ಕಾಲುವೆಯಲ್ಲೆ ತೇಲುತ್ತಿದ್ದ ಶವವನ್ನು ಪೊಲೀಸರು ಹೊರ ತೆಗೆಸುತ್ತಿದ್ದು, ಸ್ಥಳಕ್ಕೆ ತಹಸೀಲ್ದಾರ್ ಮಮತಾ ಭೇಟಿ‌ ನೀಡಿದ್ದಾರೆ. ಎತ್ತಿನಹೊಳೆ ಯೋಜನೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಗ್ರಾಮಸ್ಥರ ಹಾಗೂ ಮೃತನ ಸಂಬಂಧಿಕರು ಪಟ್ಟು ಹಿಡಿದಿದ್ದಾರೆ.