ಚಲಿಸುತ್ತಿದ್ದಾಗ ಕಳಚಿದ ಕೆ.ಎಸ್.ಆರ್.ಟಿ.ಸಿ. ಬಸ್ ಚಕ್ರ; ನಿಯಂತ್ರಣ ಕಳೆದುಕೊಂಡು ಕಾರು, ಬೈಕ್ ಗಳಿಗೆ ಡಿಕ್ಕಿ, ತಪ್ಪಿದ ಅನಾಹುತ

ಹಾಸನ: ತಾಲ್ಲೂಕಿನ ಬೇಲೂರು ರಸ್ತೆಯ ಕುಪ್ಪಳ್ಳಿ ಬಳಿ ಚಲಿಸುತ್ತಿದ್ದ ಸಾರಿಗೆ ಬಸ್‌ನ ಚಕ್ರ ಕಳಚಿ ಚಾಲಕನ ನಿಯಂತ್ರಣ ಕಳೆದುಕೊಂಡು ಕಾರು ಮತ್ತು ಬೈಕ್‌ಗಳಿಗೆ ಡಿಕ್ಕಿ ಹೊಡೆದು ಜಖಂಗೊಳಿಸಿದ್ದು, ಅದೃಷ್ಟವಶಾತ್ ಭಾರೀ ಅಪಾಯ ತಪ್ಪಿದೆ.

ಚಿಕ್ಕಮಗಳೂರಿಗೆ ತೆರಳುತ್ತಿದ್ದ KA-10-F-0406 ನಂಬರ್‌ನ ಸಾರಿಗೆ ಬಸ್‌ ವೇಗವಾಗಿ ಚಲಿಸುತ್ತಿದ್ದಾಗ ಮುಂಬದಿ ಎಡಭಾಗದ ಚಕ್ರ ಕಳಚಿತು. ಇದರಿಂದ ಬಸ್ ನಿಯಂತ್ರಣ ಕಳೆದುಕೊಂಡು ರಸ್ತೆಯ ಪಕ್ಕ ನಿಲ್ಲಿಸಿದ್ದ ಕಾರು ಮತ್ತು ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಒಂದು ಕಾರು ಮತ್ತು ಒಂದು ಬೈಕ್ ಜಖಂ ಆಗಿದ್ದರೂ, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಚಾಲಕ ಮತ್ತು ನಿರ್ವಾಹಕ ಬೇರೆ ವಾಹನದಲ್ಲಿ ಕಳುಹಿಸಿಕೊಟ್ಟರು.

ಸ್ಥಳಕ್ಕೆ ಹಾಸನ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.