ಹಾಸನ(www.kannadapost.in): ಹಾಸನಾಂಬೆ ದರ್ಶನ ಪಡೆದು ಸಂಬಂಧಿಕರ ಮನೆಗೆ ತೆರಳುತ್ತಿದ್ದ ಪಾದಚಾರಿಗಳಿಗೆ ಕಾರು ಡಿಕ್ಕಿಯಾಗಿ ತಂದೆ-ಮಗಳು ಮೃತಪಟ್ಟ ದಾರುಣ ಘಟನೆ ಗುರುವಾರ ರಾತ್ರಿ ನಗರದ ತಣ್ಣೀರುಹಳ್ಳದಲ್ಲಿ ನಡೆದಿದೆ.
ಆಲೂರು ತಾಲೂಕಿನ ಎನ್ ಹೆಚ್ ಪುರ ನಿವಾಸಿ ಕುಮಾರ (38) ಹಾಗೂ ಅವರ ಪುತ್ರಿ ಕಾವ್ಯ(12) ಮೃತಪಟ್ಟವರು. ಘಟನೆಯಲ್ಲಿ ಪತ್ನಿ ಪುಟ್ಟಮ್ಮಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದಂಪತಿ ಮತ್ತು ಮಗಳು ನಿನ್ನೆ ರಾತ್ರಿ ಹಾಸನಾಂಬೆ ದೇವಿ ದರ್ಶನ ಪಡೆದು ನಗರದ ವಿಜಯನಗರ ಬಡಾವಣೆಯ ಸಂಬಂಧಿಕರ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಸ್ವಿಫ್ಟ್ ಕಾರು ಅವರಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ತಂದೆ-ಮಗಳು ಸ್ಥಳದಲ್ಲೇ ಒದ್ದಾಡಿ ಸಾವನ್ನಪ್ಪಿದ್ದಾರೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.