ಬೇಲೂರು: ಯುವಕನನ್ನು ಸೊಂಡಿಲಿನಿಂದ ಹಿಡಿದೆಸೆದು ತುಳಿದು ಕೊಂದ ಕಾಡಾನೆ

ಹಾಸನ: ಜಿಲ್ಲೆಯಲ್ಲಿ ಮತ್ತೊಮ್ಮೆ ಕಾಡಾನೆ-ಮಾನವನ ನಡುವಿನ ಸಂಘರ್ಷ ಉಲ್ಬಣಗೊಂಡಿದ್ದು, ಬೇಲೂರು ತಾಲ್ಲೂಕಿನ ಬ್ಯಾದನೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಯುವಕ ಬಲಿಯಾದ ದಾರುಣ ಘಟನೆ ನಡೆದಿದೆ.

ಮೃತ ಯುವಕನನ್ನು ಗುಜನಹಳ್ಳಿ ಗ್ರಾಮದ ಅನಿಲ್ (28) ಎಂದು ಗುರುತಿಸಲಾಗಿದೆ. ಅನಿಲ್ ಅಣ್ಣಮಲೈ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಕೆಲಸ ಮುಗಿಸಿ ಮನೆಗೆ ತೆರಳುವ ಮಾರ್ಗದಲ್ಲಿ ಕಾಡಾನೆ ದಾಳಿ ನಡೆಸಿದೆ.

ಕಾಡಾನೆ ಆತನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ನಂತರ ತುಳಿದು ಸಾಯಿಸಿದೆ. ಘಟನೆಯ ನಂತರ ಸ್ಥಳದಲ್ಲಿ ಆತನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ತೀವ್ರ ಭೀತಿ ಮೂಡಿಸಿದೆ.

ತಕ್ಷಣವೇ ಅರಣ್ಯ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.