ವೃದ್ಧನನ್ನು ಹೊಸಕಿ ಕೊಂದು ಕಾಫಿ ಗಿಡದ ಕೊಂಬೆಗಳಡಿ ಶವ ಬಚ್ಚಿಟ್ಟ ಕಾಡಾನೆ!: ಆನೆ ದಾಳಿ ಭೀತಿಯಿಂದ ಕಂಗಾಲಾದ ರೈತರು

ಹಾಸನ: ಆಲೂರು ತಾಲ್ಲೂಕಿನ ಅಡಿಬೈಲು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಪುಟ್ಟಯ್ಯ (78) ಎಂಬ ವೃದ್ದ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ನಿನ್ನೆ ಸಂಜೆ ಮಗ್ಗೆ ಗ್ರಾಮದಿಂದ ಅಡಿಬೈಲು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ಪುಟ್ಟಯ್ಯನ ಮೇಲೆ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ಕಾಡಾನೆ ಪುಟ್ಟಯ್ಯನನ್ನು ಕಾಲಿನಿಂದ ತುಳಿದು, ಮರಕ್ಕೆ ಅಪ್ಪಳಿಸಿ ಬಿಸಾಡಿದ ಪರಿಣಾಮ, ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ.

ಕಾಫಿ ಗಿಡದ ಕೊಂಬೆಗಳಡಿ ಶವ ಬಚ್ಚಿಟ್ಟ ಕಾಡಾನೆ

ಆಮೇಲೆ ಕಾಡಾನೆ ಪುಟ್ಟಯ್ಯನ ಶವವನ್ನು ಕಾಫಿ ಗಿಡಗಳಿಂದ ಮುಚ್ಚಿ ಅಲ್ಲಿಂದ ತೆರಳಿದೆ. ಮನೆಗೆ ಪುಟ್ಟಯ್ಯ ಹಿಂತಿರುಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿ, ಇಂದು ಬೆಳಿಗ್ಗೆ ಕಾಫಿ ತೋಟದಲ್ಲಿ ಶವವನ್ನು ಪತ್ತೆಹಚ್ಚಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆದ ಆಲೂರು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಪ್ರಕಾರ, ಕಾಡಾನೆ ನಿನ್ನೆ ರಾತ್ರಿ ಕಾಫಿ ತೋಟದಲ್ಲಿ ಅಡ್ಡಾಡುತ್ತಿದ್ದು, ಪರಿಸರದಲ್ಲಿ ಆತಂಕ ಉಂಟಾಗಿದೆ.

ಗ್ರಾಮಸ್ಥರು ಕಾಡಾನೆ ಉಪಟಳಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಕ್ರಮಕ್ಕೆ ಆಗ್ರಹಿಸಿದ್ದಾರೆ.