ವಿದ್ಯುತ್ ಕಂಬವೇರಿದ್ದಾಗಲೇ ಮುರಿದು ಬಿದ್ದ ಮರ; ಲೈನ್ ಮ್ಯಾನ್ ದಾರುಣ ಸಾವು

ವಿದ್ಯುತ್ ಸಂಪರ್ಕ ತಪ್ಪಿಸಲು ಕಂಬ ಏರಿದ್ದಾಗಲೇ ಮುರಿದು ಬಿದ್ದ ಮರ

ಹಾಸನ: ವಿದ್ಯುತ್ ಕಂಬದ ಮೇಲೆ ಮರ ಬೀಳುವುದರಿಂದ ಆಗುವ ಹಾನಿ ತಪ್ಪಿಸಲು ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಕಂಬವೇರಿದ್ದ ಸೆಸ್ಕ್ ಲೈನ್ ಮ್ಯಾನ್ ಮೇಲೆ ಮರ ಬಿದ್ದು ಮೃತಪಟ್ಟ ದಾರುಣ ಘಟನೆ ಹೊಳೆನರಸಿಪುರ ತಾಲ್ಲೂಕಿನ, ಹೊನ್ನಾವರ ಗ್ರಾಮದ ಬಳಿ ಗುರುವಾರ ಸಂಭವಿಸಿದೆ.

ಸೆಸ್ಕ್ ನ ಬಂಡಿಶೆಟ್ಟಿಹಳ್ಳಿ ಶಾಖಾ ಕಚೇರಿಯಲ್ಲಿ ಕರ್ತವ್ಯ ನಜರ್ವಹಿಸುತ್ತಿದ್ದ ಸಿ.ಹಿಂದಲಹಳ್ಳಿ ಗ್ರಾಮದ ಅಭಿಕುಮಾರ್ ಹೆಚ್.ಎಸ್. (26) ಮೃತ ಲೈನ್‌ಮ್ಯಾನ್.

ಹೊನ್ನಾವರದ ರಾಘವೇಂದ್ರ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ಮರವನ್ನು ಶೇ.75 ರಷ್ಟು ಕಡಿಯಲಾಗಿತ್ತು. ಆ ಮರ ವಿದ್ಯುತ್ ತಂತಿ ಮೇಲೆ ಬೀಳುವುದನ್ನು ಗಮನಿಸಿದ ಅಭಿಕುಮಾರ್, ಮರ ಕಡಿಯುವುದನ್ನು ತಡೆದು ವಿದ್ಯುತ್ ಕಂಬ ಏರಿ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದರು.

ದುರಾದೃಷ್ಟವಶಾತ್ ಅದೇ ಸಮಯಕ್ಕೆ ಮುಕ್ಕಾಲುಪಾಲು ಕಡಿದಿದ್ದ ಮರ ವಿದ್ಯುತ್ ಕಂಬದ ಮೇಲೆ ಬಿತ್ತು. ಆಗ ಕಂಬದಿಂದ ಕೆಳಗೆ ಬಿದ್ದ ಅಭಿಕುಮಾರ್ ಸ್ಥಳದಲ್ಲೇ ಮೃತಪಟ್ಟರು.

ನಂತರ ವಿದ್ಯುತ್ ಕಂಬವೂ ನೆಲಕ್ಕುರುಳಿತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.