ಪ್ರಯಾಗ್ ರಾಜ್ ಜ.29: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಉಂಟಾಗಿ 15ಕ್ಕೂ ಅಧಿಕ ಭಕ್ತರು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಇಂದು ನಡೆಯಬೇಕಿದ್ದ ಅಮೃತ ಸ್ನಾನವನ್ನು ರದ್ದು ಮಾಡಲಾಗಿದೆ ಎಂದು ಅಖಾಡ ಪರಿಷತ್ ತಿಳಿಸಿದೆ.
ಇಂದು ಮೌನಿ ಅಮಾವಾಸ್ಯೆ ಇರುವ ಕಾರಣ ಎರಡನೇ ಅಮೃತ ಸ್ನಾನ ಕೈಗೊಳ್ಳಲು ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಕಾಲ್ತುಳಿತ ಸಂಭವಿಸಿದೆ ಎಂದು ವರದಿಯಾಗಿದೆ. ತ್ರಿವೇಣಿ ಸಂಗಮದಲ್ಲಿ ಸಂಭವಿಸಿರುವ ಕಾಲ್ತುಳಿತದ 50 ಕ್ಕೂ ಹೆಚ್ಚು ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ಎರಡು ದಿನಗಳಿಂದ 3 ಕೋಟಿ ಭಕ್ತರು ಸಂಗಮದಲ್ಲಿ ಪವಿತ್ರ ಸ್ನಾನ ಕೈಗೊಂಡಿದ್ದಾರೆ. ಮಂಗಳವಾರ ರಾತ್ರಿಯಿಂದಲೇ ಮೌನಿ ಅಮಾವಾಸ್ಯೆಯ ಅಮೃತ ಸ್ನಾನ ಆರಂಭವಾದ ಹಿನ್ನೆಲೆಯಲ್ಲಿ, ನಗರದ ತ್ರಿವೇಣಿ ಮಾರ್ಗ, ಕಾಳಿ ಮಾರ್ಗ ಸೇರಿದಂತೆ ಸಂಗಮದ ಸುತ್ತಮುತ್ತಲಿನ ರಸ್ತೆಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ಹೀಗಾಗಿ ಜನರ ನಿಯಂತ್ರಣಕ್ಕೆ ಅಧಿಕಾರಿಗಳು ಭದ್ರತೆ ಹೆಚ್ಚಿಸಿದ್ದಾರೆ. ಭಕ್ತರ ಓಡಾಟಕ್ಕೆ ಅನುಕೂಲವಾಗಲು ಈ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಮಹಾ ಕುಂಭಮೇಳದ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆ ಮಾತನಾಡಿ, ಬೆಳವಣಿಗೆಗಳನ್ನು ಪರಿಶೀಲಿಸಿದರು ಮತ್ತು ತಕ್ಷಣದ ಬೆಂಬಲ ಕ್ರಮಗಳಿಗೆ ಕರೆ ನೀಡಿದ್ದಾರೆ.