ಹಾಸನ, ಮೇ 31, 2025: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಸಕಲೇಶಪುರ, ಆಲೂರು, ಅರಕಲಗೂಡು, ಮತ್ತು ಬೇಲೂರು ತಾಲ್ಲೂಕುಗಳಲ್ಲಿ ಒಟ್ಟು 58 ಮನೆಗಳಿಗೆ ಹಾನಿಯಾಗಿದ್ದು, 4 ಮನೆಗಳು ಸಂಪೂರ್ಣ ಕುಸಿದಿವೆ ಎಂದು ಸಕಲೇಶಪುರ ಉಪವಿಭಾಗಾಧಿಕಾರಿ ಡಾ. ಶ್ರುತಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಕಲಗೂಡು ತಾಲ್ಲೂಕಿನಲ್ಲಿ 4 ಮನೆಗಳು ಕುಸಿದಿದ್ದು, 18 ಮನೆಗಳಿಗೆ ಹಾನಿಯಾಗಿದೆ. ಸಕಲೇಶಪುರದಲ್ಲಿ 19, ಆಲೂರಿನಲ್ಲಿ 10, ಮತ್ತು ಬೇಲೂರಿನಲ್ಲಿ 11 ಮನೆಗಳಿಗೆ ಹಾನಿಯಾಗಿದೆ.
ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ, ಸಂಪೂರ್ಣ ಕುಸಿದ ಮನೆಗಳಿಗೆ ₹1.20 ಲಕ್ಷ ಮತ್ತು ಹಾನಿಗೊಳಗಾದ ಮನೆಗಳಿಗೆ ₹6,500 ಪರಿಹಾರ ನೀಡಲಾಗುತ್ತಿದೆ. ಮನೆಯ ತಡೆಗೋಡೆಗಳು ಕುಸಿದಿದ್ದರೆ, ಪುರಸಭೆಯೊಂದಿಗೆ ಸಹಕರಿಸಿ ಪರಿಹಾರ ಒದಗಿಸಲಾಗುವುದು.
ಅರಕಲಗೂಡಿನಲ್ಲಿ 3, ಸಕಲೇಶಪುರದಲ್ಲಿ 1, ಬೇಲೂರಿನಲ್ಲಿ 2, ಮತ್ತು ಆಲೂರಿನಲ್ಲಿ 1 ಜಾನುವಾರು ಸಾವನ್ನಪ್ಪಿದ್ದು, ಒಟ್ಟು 7 ಜಾನುವಾರುಗಳು ಮೃತಪಟ್ಟಿವೆ. ಇವುಗಳಿಗೆ ತಲಾ ₹37,500 ಪರಿಹಾರ ನೀಡಲಾಗುತ್ತಿದೆ. ಇದುವರೆಗೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ ಎಂದರು.
ಸಕಲೇಶಪುರ ಪಟ್ಟಣದಲ್ಲಿ ಹೋಟೆಲ್ ಗೋಡೆ ಕುಸಿದು ನಾಲ್ವರು ಗಾಯಗೊಂಡಿದ್ದು, ವೈದ್ಯರ ವರದಿಯ ಆಧಾರದಲ್ಲಿ ಪರಿಹಾರ ನೀಡಲಾಗುವುದು. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂಕುಸಿತವಾದರೂ, ಮಣ್ಣನ್ನು ತಕ್ಷಣ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.
ಬಿದ್ದ ಮರಗಳನ್ನು ತೆರವುಗೊಳಿಸಲಾಗುತ್ತಿದ್ದು, ಕಂಬಗಳು ಮುರಿದು ವಿದ್ಯುತ್ ಕಡಿತಗೊಂಡ ಪ್ರದೇಶಗಳಲ್ಲಿ ತುರ್ತು ದುರಸ್ತಿಗೆ ಸೆಸ್ಕ್ ಗೆ ಸೂಚನೆ ನೀಡಲಾಗಿದೆ. ಬಿಸಿಲೆ ಮತ್ತು ಹೆತ್ತೂರು ಭಾಗಗಳಲ್ಲಿ ಕಡಿತಗೊಂಡಿದ್ದ ವಿದ್ಯುತ್ ಸಂಪರ್ಕವನ್ನು ದುರಸ್ತಿಗೊಳಿಸಲಾಗುತ್ತಿದೆ. ಸೆಸ್ಕ್ 24×7 ಕಂಟ್ರೋಲ್ ರೂಂ ತೆರೆದಿದೆ ಎಂದು ಮಾಹಿತಿ ನೀಡಿದರು.