ಅರಣ್ಯ ಇಲಾಖೆ ಬಲೆಗೆ ಬಿದ್ದ ಬಲಿಷ್ಠ ಒಂಟಿ ಸಲಗ ʼತಣ್ಣೀರ್‌ʼ; ಅರಿವಳಿಕೆ ಚುಚ್ಚುಮದ್ದು ನೀಡಿದರೂ ಒಂದು ಗಂಟೆ ಓಡಿದ ಕಾಡಾನೆ!

ಆನೆಗೆ ರೇಡಿಕೆ ಕಾಲರ್‌ ಅಳವಡಿಕೆ, ಬೇರೆಡೆಗೆ ಸ್ಥಳಾಂತರ

ಅರಣ್ಯ ಇಲಾಖೆ ಸೆರೆ ಹಿಡಿದ ತಣ್ಣೀರ್‌ ಸಲಗವನ್ನು ಸಾಕಾನೆಗಳು ರಸ್ತೆವರೆಗೆ ಎಳೆದು ತಂದಾಗಿನ ದೃಶ್ಯ

ಹಾಸನ: ಅರಿವಳಿಕೆ ಚುಚ್ಚುಮದ್ದು ನೀಡಿದರೂ ಪ್ರಜ್ಞೆ ಕಳೆದುಕೊಳ್ಳದೆ ಮನಸೋಇಚ್ಛೆ ಓಡಾಡಿದ ಬೃಹತ್‌ ಸಲಗವನ್ನು ಅರಣ್ಯ ಇಲಾಖೆ ಮಂಗಳವಾರ ಸುರಕ್ಷಿತವಾಗಿ ಸೆರೆ ಹಿಡಿದಿದೆ.

ತಣ್ಣೀರ್‌ ಎಂಬ ಹೆಸರಿನಿಂದ ಗುರುತಿಸುತ್ತಿದ್ದ ಭಾರಿ ಗಾತ್ರದ ಸಲಗವನ್ನು ಅರಣ್ಯ ಇಲಾಖೆಯ ತಂಡ ಸಾಕಷ್ಟು ಬೆವರು ಹರಿಸಿ ಬೇಲೂರು ತಾಲೂಕಿನ ಚಿಕ್ಕೋಟೆ ಗ್ರಾಮದಲ್ಲಿ ಬಂಧನಕ್ಕೊಳಪಡಿಸುವಲ್ಲಿ ಯಶಸ್ವಿಯಾಯಿತು.

ಬೆಳಿಗ್ಗೆ ಐದು ಗಂಟೆಗೇ ಹುಡುಕಾಟ ಆರಂಭಿಸಿ ಕಾಡಾನೆ ಇರುವ ಜಾಗ ಪತ್ತೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ ಹತ್ತು ಗಂಟೆಗೆ ಕಾರ್ಯಾಚರಣೆ ಆರಂಭಿಸಿದ್ದರು. ಸಾಮಾನ್ಯವಾಗಿ ಕಾಡಾನೆಗಳು ಅರಿವಳಿಕೆ ಚುಚ್ಚುಮದ್ದು ನೀಡಿದ ಹತ್ತು ನಿಮಿಷಗಳಲ್ಲಿಯೇ ಪ್ರಜ್ಞಾಶೂನ್ಯವಾಗುತ್ತವೆ. ಆದರೆ ಈ ಬೃಹತ್‌ ಗಾತ್ರದ ಬಲಿಷ್ಠ ಆನೆ ತಣ್ಣೀರ್‌ ಅರಿವಳಿಕೆ ಚುಚ್ಚುಮದ್ದು ತಾಕಿದರೂ ಒಂದು ಗಂಟೆಗೂ ಹೆಚ್ಚು ಸಮಯ ಸಿಕ್ಕಸಿಕ್ಕೆಡೆಗೆ ಓಡಿತು. ಆಗೆಲ್ಲ ಸಾಕಾನೆಗಳೊಂದಿಗೆ ಎಚ್ಚರಿಕೆಯಿಂದ ಅದನ್ನು ಹಿಂಬಾಲಿಸಿದ ಅರಣ್ಯ ಇಲಾಖೆ ತಂಡ ಕಾಫಿ ತೋಟದಲ್ಲಿ ಒಂಟಿ ಸಲಗ ಪ್ರಜ್ಞೆ ತಪ್ಪಿ ಬೀಳುವವರೆಗೂ ಕಾದರು.

ನಂತರ ಎಂಟು ಸಾಕಾನೆಗಳೊಂದಿಗೆ ಹರಸಾಹಸಪಟ್ಟು ಸೆರೆ ಸಿಕ್ಕ ಸಲಗವನ್ನು ರಸ್ತೆವರೆಗೂ ಎಳೆದುತಂದ ಅರಣ್ಯ ಸಿಬ್ಬಂದಿ ನಂತರ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಿದರು.