ಹಾಸನ: ಬೀದಿನಾಯಿಯೊಂದು ಮಹಿಳೆಯರು, ಮಕ್ಕಳು ಸೇರಿದಂತೆ ಸಿಕ್ಕ ಸಿಕ್ಕವರ ಮೇಲೆ ಎರಗಿ ಅಟ್ಟಾಡಿಸಿ ಕಚ್ಚಿದ್ದರಿಂದ 9 ಜನರು ಗಾಯಗೊಂಡ ಘಟನೆ ನಗರದ ಸಿದ್ದಯ್ಯನಗರ ಬಡಾವಣೆಯಲ್ಲಿ ನಡೆದಿದೆ.
ಸಿದ್ದಯ್ಯನಗರದ ರಸ್ತೆಗಳಲ್ಲಿ ಬೇಕಾಬಿಟ್ಟಿ ಓಡಾಡಿದ ಬೀದಿನಾಯಿ ಜನರ ಮೇಲೆ ದಾಳಿ ಮಾಡಲಾರಂಭಿಸಿತು. ಜನರು ಅದರಿಂದ ತಪ್ಪಿಸಿಕೊಳ್ಳುವಷ್ಟರಲ್ಲಿ ಅದು ಕಚ್ಚಿ ಗಾಯಗೊಳಿಸಿತು.
ಒಂದು ರಸ್ತೆಯಲ್ಲಿ ಜನರು ದೊಣ್ಣೆ ಹಿಡಿದು ಓಡಿಸಿದರೆ ಮತ್ತೊಂದು ರಸ್ತೆಗೆ ಓಡಿ ಅಲ್ಲಿ ಪಾದಚಾರಿಗಳ ಮೇಲೆ ದಾಳಿ ಮಾಡಿ ಪರಾರಿಯಾಗುತ್ತಿತ್ತು. ಜನರು ಬೆನ್ನತ್ತಿದರೂ ಸಿಗದೆ ತಪ್ಪಿಸಿಕೊಂಡು ಓಡಿದ ಶ್ವಾನ ಒಂಭತ್ತು ಜನರನ್ನು ಗಾಯಗೊಳಿಸಿದ್ದು ಎಲ್ಲರೂ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಾಳಿ ಮಾಡಿದ ನಾಯಿಗೆ ರೇಬಿಸ್ ಸೋಂಕು ತಗುಲಿರುವ ಭೀತಿಯಿದ್ದು, ಹುಚ್ಚುನಾಯಿ ಕಡಿತದಿಂದ ಗಾಯಾಳುಗಳೂ ಭೀತಿ ಎದುರಿಸುವಂತಾಗಿದೆ.