ನವದೆಹಲಿ: ಬರ, ಕೀಟ ಮತ್ತು ವಿವಿಧ ರೋಗಗಳ ದಾಳಿಯಿಂದ ಹಾನಿಗೊಳಗಾಗಿರುವ ಹಾಸನ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳ ತೆಂಗು ಬೆಳೆಗಾರರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು. ಜೊತೆಗೆ ನ್ಯಾಫೆಡ್ ಮೂಲಕ ದರ ಕುಸಿತ ಕಂಡಿರುವ ಕೊಬ್ಬರಿ ಖರೀದಿ ಮಾಡಬೇಕು ಎಂದು ಆಗ್ರಹಿಸಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಇಂದು ಜೆಡಿಎಸ್ ಶಾಸಕರ ನಿಯೋಗ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ದೇಶದಲ್ಲಿ ತೆಂಗು ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಹಾಸನ, ತುಮಕೂರು, ಮಂಡ್ಯ ಜಿಲ್ಲೆಗಳಲ್ಲಿ ೫,೯೧,೦೦೦ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ.
ಚಿಕ್ಕಮಗಳೂರು, ಚಿತ್ರದುರ್ಗ, ಮೈಸೂರು, ರಾಮನಗರ ಮತ್ತು ಇತರೆ ಜಿಲ್ಲೆಗಳಲ್ಲೂ ತೆಂಗು ಫಸಲು ಇದೆ. ಹಾಸನ ಜಿಲ್ಲೆಯೊಂದರಲ್ಲೇ ೯೮.೦೦೦ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಜೀವನೋಪಾಯಕ್ಕಾಗಿ ಈ ಬೆಳೆಯನ್ನೇ ಅವಲಂಬಿಸಿದ್ದಾರೆ.
ಆದರೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬರ ಆವರಿಸಿದೆ. ಈ ಸ್ಥಿತಿ ತೆಂಗಿನಕಾಯಿ ಬೆಳವಣಿಗೆಯಲ್ಲಿ ಕುಂಠಿತ ಮತ್ತು ಉತ್ಪಾದನೆಯಲ್ಲಿ ಇಳಿಕೆಗೆ ಕಾರಣವಾಗಿದೆ.
ಬರದಿಂದ ತತ್ತರಿಸಿರುವ ರೈತರು ಕೀಟ ಮತ್ತು ರೋಗಗಳ ಸೋಂಕು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇಳುವರಿ ನೀಡಿರುವ ಬೆಳೆ ನಾಶವಾಗುತ್ತಿರುವುದರಿಂದ ಅನೇಕ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.ಇದು ಕರ್ನಾಟದಲ್ಲಿ ತೆಂಗು ಬೆಳೆಯವ ಪ್ರದೇಶದಲ್ಲಿ ಹೆಚ್ಚಾಗುತ್ತಿದೆ. ಈ ಬಾರಿ ಶೇ. ೫೦ ಕ್ಕಿಂತ ಕಡಿಮೆ ಮಳೆಯಾಗಿರುವುದಿರಂದ ಭೀಕರ ಬರಗಾಲದಿಂದಾಗಿ ತೆಂಗು ಬೆಳೆ ಒಣಗುತ್ತಿದ್ದು, ಇಳುವರಿ ಗಣನೀಯವಾಗಿ ಕುಸಿದಿದೆ. ಈ ವರ್ಷ ತೆಂಗಿನ ಬೆಳೆ ಇಳುವರಿ ವಾರ್ಷಿಕ ಇಳುವರಿಯಲ್ಲಿ ಶೇ.೩೦ ಕ್ಕಿಂತ ಹೆಚ್ಚಿಲ್ಲ ಎಂದು ಅಂದಾಜಿಸಲಾಗಿದೆ.
ಆದ್ದರಿAದ ರೈತರ ಆತ್ಮಹತ್ಯೆ ತಡೆಯಲು ರೈತರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಒದಗಿಸಬೇಕು. ತೆಂಗು ಬೆಳೆಗೆ ವಿವಿಧ ಕೀಟ ಬಾಧೆಯಿಂದಾಗಿ ತೀವ್ರ ಹಾನಿಗೊಳಗಾಗಿರುವ ರೈತರು, ತಮ್ಮ ತಮ್ಮ ತೆಂಗಿನ ತೋಟಗಳಲ್ಲಿ ಉತ್ಪಾದಕತೆ ಕಾಪಾಡಿಕೊಳ್ಳುವಲ್ಲಿ ಅನೇಕ ರೀತಿಯ ಸವಾಲು ಎದುರಿಸುತ್ತಿದ್ದಾರೆ.
ಈ ಎಲ್ಲಾ ಕಾರಣಗಳಿಂದ ಕೇಂದ್ರ ಸರ್ಕಾರವು ತೆಂಗು ರೈತರಿಗೆ ಕೀಟ ಮತ್ತು ರೋಗಗಳ ನಿರ್ವಹಣೆಗಾಗಿ ವಿಶೇಷ ಪ್ಯಾಕೇಜ್ ಒದಗಿಸಬೇಕು. ಇಲ್ಲದಿದ್ದರೆ ರೈತರು ತೀವ್ರ ಆರ್ಥಿಕ ನಷ್ಟಕ್ಕೆ ಗುರಿಯಾಗಬೇಕಾಗುತ್ತದೆ ಎಂದು ನಿಯೋಗ ಮನವಿ ಮಾಡಿದೆ.
ಇನ್ನೊಂದೆಡೆ ಕೊಬ್ಬರಿ ಬೆಲೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ ಮತ್ತು ಕೊಬ್ಬರಿ ಬೆಲೆ ಕ್ವಿಂಟಾಲ್‌ಗೆ ೮೦೦೦ ರೂ. ಇದೆ. ಕಾರ್ಮಿಕ, ಸಾರಿಗೆ ಉತ್ಪಾದನಾ ವೆಚ್ಚ ಕಳೆದ ಎರಡು ವರ್ಷಗಳಲ್ಲಿ ಗಗನಕ್ಕೇರಿದೆ. ರೈತರು ತೆಂಗಿನಕಾಯಿ ಅಥವಾ ಕೊಬ್ಬರಿಯನ್ನು ನಷ್ಟದಲ್ಲೇ ಮಾರಾಟ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ೨೦೨೩ ರಲ್ಲಿ ಮಿಲ್ಲಿಂಗ್ ಕೊಬ್ಬರಿಗೆ ಪ್ರತಿ ಕ್ವಿಂಟಾಲ್‌ಗೆ ೧೦,೮೬೦ ರೂ., ಚೆಂಡು ಕೊಬ್ಬರಿಗೆ ೧೧,೭೫೦ ಕ್ಕೆ ಎಂಎಸ್‌ಪಿ ನಿಗದಿಪಡಿಸಿದೆ.
ಆದರೆ, ಎಂಎಸ್‌ಪಿಯಿAದ ರೈತರು ನಿರಾಸೆಗೊಂಡಿದ್ದಾರೆ. ಇದಲ್ಲದೆ, ಅಧಿಕಾರಿಗಳು ರಾಜ್ಯದಲ್ಲಿ ಕೊಬ್ಬರಿಯನ್ನು ಸರಿಯಾಗಿ ಸಂಗ್ರಹಿಸುತ್ತಿಲ್ಲ ಎಂದು ಮನವರಿಕೆ ಮಾಡಿದರು.
ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಬೇಕು ಮತ್ತು ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ ೧೫,೦೦೦ ಎಂಎಸ್‌ಪಿ ದರ ಮರು ನಿಗದಿಪಡಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕರಾದ ಸಿ.ಎನ್.ಬಾಲಕೃಷ್ಣ, ಕೆ.ಆರ್.ಪೇಟೆಯ ಮಂಜುನಾಥ್, ಹೆಚ್.ಪಿ.ಸ್ವರೂಪ್ ಪ್ರಕಾಶ್ ಇದ್ದರು.