ಪ್ರೀತಂಗೌಡ ಟೀಂ ಮುನಿಸು ಶಮನಕ್ಕೆ ಸಮನ್ವಯ ಸಭೆ ಕರೆದ ಬಿಜೆಪಿ ನಾಯಕರು; ನಾಳೆಯಿಂದ ಪ್ರಜ್ವಲ್ ಪರ ಬಿಜೆಪಿ ಪ್ರಚಾರ?

ಬೆಂಗಳೂರಿನ ಶಾಂಘ್ರಿಲಾ ಹೋಟೆಲ್ ನಲ್ಲಿ ಸಮನ್ವಯ ಸಮಿತಿ ಸಭೆ

ಹಾಸನ;  ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ ನಡೆದರೂ ಹಾಸನದಲ್ಲಿ ಒಂದಾಗದ ಬಿಜೆಪಿ-ಜೆಡಿಎಸ್ ಮುಖಂಡರನ್ನು ಒಗ್ಗೂಡಿಸಲು ಇಂದು ಸಂಜೆ ವಿಶೇಷ ಸಮನ್ವಯ ಸಭೆ ಏರ್ಪಡಿಸಲಾಗಿದ್ದು, ಪ್ರೀತಂಗೌಡ ಟೀಂ ಮುನಿಸು ಶಮನಗೊಂಡು ಪ್ರಚಾರ ಕಣಕ್ಕಿಳಿಯುವ ನಿರೀಕ್ಷೆ ಮೂಡಿದೆ.

ಪ್ರಜ್ವಲ್ ರೇವಣ್ಣ ಕಣಕ್ಕಿಳಿಸಲು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅದರ ಪರಿಣಾಮವಾಗಿ ಅವರ ಕಟ್ಟಾ ಬೆಂಬಲಿಗರಾದ ಶಾಸಕರ ಎ.ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಗೌಡರ ಕುಟುಂಬದ ಕಟು ಟೀಕಾಕಾರರಾಗಿರುವ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರು ಜೆಡಿಎಸ್ ನಾಯಕರನ್ನು ಭೇಟಿ ಆಗಲೂ ಇಚ್ಛಿಸದೆ ಅಸಹಕಾರ ತೋರಿದ್ದರು.

ಇದು ಮೈತ್ರಿ ಪಕ್ಷ‌ ಜೆಡಿಎಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಈ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠರು ಬಿಜೆಪಿ ಹೈಕಮಾಂಡ್‌ ‌ಸಹಕಾರ ಬಯಸಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಸಂಜೆ 7 ಗಂಟೆಗೆ ಬೆಂಗಳೂರಿನ ಶಾಂಘ್ರಿಲಾ ಹೋಟೆಲ್ ನಲ್ಲಿ ಸಮನ್ವಯ ಸಭೆ ಏರ್ಪಡಿಸಲಾಗಿದೆ.

ಬಿಜೆಪಿ ರಾಜ್ಯ ಚುನಾವಣೆ ಉಸ್ತುವಾರಿ ರಾಧಮೋಹನ್ ಅಗರ್‌ವಾಲ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ, ಶಾಸಕ ಸಿಮೆಂಟ್‌ಮಂಜು, ಮಾಜಿಶಾಸಕ ಎ.ಟಿ.ರಾಮಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಸೇರಿ ಹಲವು ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ.

ಜೆಡಿಎಸ್‌ನಿಂದ ಮಾಜಿಸಚಿವ ಎಚ್.ಡಿ.ರೇವಣ್ಣ, ಮೈತ್ರಿ ಅಭ್ಯರ್ಥಿ ಹಾಗೂಬಸಂಸದ ಪ್ರಜ್ವಲ್‌ರೇವಣ್ಣ, ಶಾಸಕರಾದ ಸಿ.ಎನ್.ಬಾಲಕೃಷ್ಣ, ಎ.ಮಂಜು, ಎಚ್.ಪಿ.ಸ್ವರೂಪ್‌ಪ್ರಕಾಶ್ ಪಾಲ್ಗೊಳ್ಳುವರು.

ತೀವ್ರ ಕುತೂಹಲ ಮೂಡಿಸಿದ ಇಂದಿನ ಸಭೆಯಲ್ಲಿ ಎರಡೂ ಪಕ್ಷದ ನಾಯಕರನ್ನು ಒಗ್ಗೂಡಿಸಲು ಬಿಜೆಪಿ ರಾಜ್ಯ ನಾಯಕರು ಸಂಧಾನ ನಡೆಸಲಿದ್ದಾರೆ. ಅದು ಫಲಪ್ರದವಾದಲ್ಲಿ ನಾಳೆಯಿಂದ ಪ್ರಜ್ವಲ್ ಪರ ಪ್ರೀತಂಗೌಡ ಟೀಂ ಪ್ರಚಾರ ಆರಂಭಿಸಲಿದೆ.