ಬೇಲೂರು: ಪಟ್ಟಣದ ನೆಹರು ನಗರದಲ್ಲಿ ಶನಿವಾರ ಯುವಕನೊಬ್ಬ ತನ್ನ ಬೈಕ್ ರಸ್ತೆ ಕಡೆಗೆ ತಿರುಗಿಸಲು ಅಡ್ಡವಾಗಿ ನಿಂತಿದೆ ಎಂಬ ಕಾರಣಕ್ಕಾಗಿ ಪ್ರಯಾಣಿಕರ ಸೀಟಿನಲ್ಲಿ ಮೂರ್ನಾಲ್ಕು ಮಕ್ಕಳು ಕುಳಿತಿದ್ದ ಆಟೋವನ್ನು ನ್ಯೂಟ್ರಲ್ ಮಾಡಿ ಹಿಮ್ಮುಖವಾಗಿ ಇಳಿಜಾರಿನಲ್ಲಿ ಚಲಿಸಲು ಬಿಟ್ಟು ಮಕ್ಕಳ ಪ್ರಾಣವನ್ನು ಅಪಾಯಕ್ಕೆ ಒಡ್ಡಿದ ಆಘಾತಕಾರಿ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹಾಸನ ಮೂಲದ ವ್ಯಕ್ತಿಯೊಬ್ಬರು ತಮ್ಮ ಆಟೋವನ್ನು ಅಂಗಡಿಯ ಮುಂದೆ ನಿಲ್ಲಿಸಿ ಒಳಗೆ ತೆರಳಿದ್ದ ವೇಳೆ, ತನ್ನ ಬೈಕ್ ತೆಗೆದುಕೊಂಡು ಹೋಗಲು ಬಂದ ಯುವಕನಿಗೆ ಆಟೋ ಅಡ್ಡಿಯಾಗಿತ್ತು. ಕೆಲ ನಿಮಿಷ ಕಾದ ಬಳಿಕ, ಯುವಕ ಆಟೋವನ್ನು ನ್ಯೂಟ್ರಲ್‌ಗೆ ಹಾಕಿ ಬಿಟ್ಟಿದ್ದಾನೆ. ಇದರಿಂದ ಆಟೋ ಹಿಮ್ಮುಖವಾಗಿ ಚಲಿಸತೊಡಗಿದೆ. ಇದರಿಂದ ಆಟೋದೊಳಗೆ ಕುಳಿತಿದ್ದ ಪುಟ್ಟ ಮಕ್ಕಳ ಜೀವಕ್ಕೆ ತೊಂದರೆಯಾಗುವ ಸ್ಥಿತಿ ನಿರ್ಮಾಣವಾಯಿತು.
ಆಟೋ ಚಲಿಸುವುದನ್ನು ಗಮನಿಸಿದ ಚಾಲಕ ಹಾಗೂ ಸ್ಥಳದಲ್ಲಿದ್ದವರು ಓಡಿಹೋಗಿ ಆಟೋವನ್ನು ನಿಲ್ಲಿಸಿದ್ದಾರೆ. ಅದೃಷ್ಟವಶಾತ್, ಕೂದಲೆಳೆ ಅಂತರದಲ್ಲಿ ಮಕ್ಕಳು ಅಪಾಯದಿಂದ ಪಾರಾಗಿವೆ. ಆದರೆ, ಯುವಕ ತನ್ನ ಬೈಕ್‌ನಲ್ಲಿ ತನ್ನ ಪಾಡಿಗೆ ತಾನು ತೆರಳಿದ್ದಾನೆ. ಈ ಘಟನೆಯ ದೃಶ್ಯ ಸ್ಥಳದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಈ ಕೃತ್ಯ ಎಸಗಿಸ ಐರವಳ್ಳಿ ಗ್ರಾಮದ ಯುವಕನನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕಿಡಿಗೇಡಿ ಕೃತ್ಯಗಳ ಬಗ್ಗೆ ಜನರು ಎಚ್ಚರವಹಿಸಬೇಕಿದೆ.