ಹಾಸನ: ಹೃದಯಾಘಾತಕ್ಕೆ ಹದಿಹರೆಯದವರು ಬಲಿಯಾಗುವ ಪ್ರಕರಣಗಳು ಆತಂಕ ಮೂಡಿಸಿರುವಾಗಲೇ ಆಲೂರು ತಾಲೂಕಿನ ಚನ್ನಾಪುರ ಗ್ರಾಮದಲ್ಲಿ ಹನ್ನೊಂದು ವರ್ಷದ ಬಾಲಕನೊಬ್ಬ ಹಾರ್ಟ್ ಅಟ್ಯಾಕ್ ನಿಂದ ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ಕಾವ್ಯಶ್ರೀ ಎಂಬವರ ಪುತ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಸಚಿನ್ (11) ಮೃತಪಟ್ಟ ಬಾಲಕ.
ನಿನ್ನೆ ಇದ್ದಕ್ಕಿದ್ದಂತೆ ಸಚಿನ್‌ಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಾಲೆಗೆ ಹೋಗದೇ ಮನೆಯಲ್ಲೆ ಟಿವಿ ವೀಕ್ಷಿಸುತ್ತಿದ್ದ. ಆಗ ತೀವ್ರವಾಗಿ ಎದೆನೋವು ಕಾಣಿಸಿಕೊಂಡು ಅಲ್ಲಿಯೇ ಕುಸಿದು ಮೃತಪಟ್ಟಿದ್ದಾನೆ.
ಸ್ವಲ್ಪ ಸಮಯದ ನಂತರ ಸಚಿನ್‌ನನ್ನು ಮಾತನಾಡಿಸಲು ಬಂದ ಮನೆಯವರು ಆತ ಮಾತನಾಡದೆ ಇರುವುದನ್ನ ಗಮನಿಸಿ ತಕ್ಷಣವೇ ಆಲೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಬಾಲಕ ಮೃತಪಟ್ಟಿರುವುದನ್ನು ದೃಢ ಪಡಿಸಿದರು.
ಮಗನನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲುಮುಟ್ಟಿದ್ದು ಚಿಕ್ಕವಯಸ್ಸಿನಲ್ಲೇ ಬಾಲಕ ಹೃದಯಾಘಾತಕ್ಕೆ ಬಲಿಯಾದ ಘಟನೆ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ.