ಹಾಸನ, ಫೆಬ್ರವರಿ 18: ಸಕಲೇಶಪುರ ತಾಲ್ಲೂಕಿನ ಅರೆಕೆರೆ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹೋರಿ ಕರುವನ್ನು ದುಷ್ಕರ್ಮಿಗಳು ಮಚ್ಚಿನಿಂದ ಮನಬಂದಂತೆ ಕೊಚ್ಚಿ ಗಾಯಗೊಳಿಸಿರುವ ಆಘಾತಕಾರಿ ಘಟನೆ ನಡೆದಿದೆ.
ನವೀನ್ ಎಂಬುವವರಿಗೆ ಸೇರಿದ ಹೋರಿ ಕರು ಅಮಾನುಷ ದಾಳಿಯಿಂದ ರಕ್ತದ ಮಡುವಿನಲ್ಲಿ ನರಳಾಡುವಂತಾಗಿದೆ. ತಕ್ಷಣವೇ ಸ್ಥಳೀಯರು ವೈದ್ಯರಿಗೆ ಮಾಹಿತಿ ನೀಡಿದ್ದು, ಪಶುವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಈ ಮೊದಲು ನವೀನ್ ಅವರು ಸಾಕುತ್ತಿದ್ದ ಜಾನುವಾರುಗಳ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು.
ಘಟನೆಯ ಕುರಿತು ಮಾಹಿತಿ ಪಡೆದ ಸಕಲೇಶಪುರ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗ್ರಾಮಸ್ಥರು ಈ ಅಮಾನವೀಯ ಕೃತ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಒತ್ತಾಯಿಸಿದ್ದಾರೆ.