ಭೂಪಾಲ್, ಫೆಬ್ರವರಿ 3: ಸಾಮಾನ್ಯವಾಗಿ ತಂದೆ ತೀರಿಹೋದ ನಂತರ ಅವರ ಆಸ್ತಿ ತುಂಡು ಮಾಡಿ ಹಂಚಿಕೊಳ್ಳಲು ಸಹೋದರರು ಕಿತ್ತಾಡುತ್ತಾರೆ. ಆದರೆ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ತಾವೇ ತಂದೆಯ ಅಂತ್ಯಸಂಸ್ಕಾರ ಮಾಡಬೇಕು ಎಂದು ಜಿದ್ದಿಗೆ ಬಿದ್ದ ಸಹೋದರರು ಅಪ್ಪನ ಶವವನ್ನೇ ಎರಡು ತುಂಡುಗಳಾಗಿ ಮಾಡಿ ಪ್ರತ್ಯೇಕವಾಗಿ ಅಂತ್ಯ ಸಂಸ್ಕಾರ ಮಾಡುತ್ತೇವೆಂದು ಹೊರಟಿದ್ದ ಆಘಾತಕಾರಿ ಘಟನೆ ವರದಿಯಾಗಿದೆ.
ಈ ಘಟನೆ ಫೆಬ್ರವರಿ 2 ರ ಭಾನುವಾರದಂದು ಮಧ್ಯಪ್ರದೇಶದ ಟಿಕಮ್‌ಗಢ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಂಭವಿಸಿದೆ.
ಮೃತ ಧ್ಯಾನಿ ಸಿಂಗ್ ಘೋಷ್ (85) ಅವರ ದೇಹವು ತಾಲ್ ಲಿಧೋರಾ ಗ್ರಾಮದ ಗ್ರಾಮಸ್ಥರು ಅನಾಥವಾಗಿರುವುದನ್ನು ಕಂಡು ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಧ್ಯಾನಿ ಸಿಂಗ್ ಘೋಷ್ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲಿ ಮೃತಪಟ್ಟಿದ್ದರು.
ದಾಮೋದರ್, ತಮ್ಮ ಅನಾರೋಗ್ಯ ಪೀಡಿತ ತಂದೆಯ ಆರೈಕೆ ನಡೆಸಿದ್ದರು ಮತ್ತು ಅವರು ಮೃತರಾದಾಗ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದರು. ಆಗ ತನ್ನ ಕುಟುಂಬದೊಂದಿಗೆ ಬಂದ ಅವರ ಸಹೋದರ ಕಿಶನ್ ತಾನೇ ತಂದೆಯ ಅಂತ್ಯಕ್ರಿಯೆ ನಡೆಸಬೇಕು ಎಂದು ಪಟ್ಟು ಹಿಡಿದಾಗ ಇಬ್ಬರ ನಡುವೆ ಜಗಳ ಆರಂಭವಾಯಿತು. ಕಡೆಗೆ ಇದು ತಂದೆಯ ಮೃತದೇಹವನ್ನು ಛೇದಿಸಿ ಇಬ್ಬರೂ ಸಮವಾಗಿ ಒಂದೊಂದು ಭಾಗ ಪಡೆದು ಪ್ರತ್ಯೇಕವಾಗಿ ಅಂತ್ಯ ಸಂಸ್ಕಾರ ನೆರವೇರಿಸೋಣ ಎನ್ನುವವರೆಗೆ ಮುಂದುವರಿಯಿತು.
ಗ್ರಾಮಸ್ಥರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಹೋದ ಪೊಲೀಸರು ದಾಮೋದರ್ ಹಾಗೂ ಕಿಶನ್ ಇಬ್ಬರನ್ನೂ ಸಮಾಧಾನಪಡಿಸಿದರು. ಕಡೆಗೆ ಪೊಲೀಸರ ಸೂಚನೆಯಂತೆ ಕಿಶನ್ ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ದಾಮೋದರ್ ಅಂತ್ಯಸಂಸ್ಕಾರ ವಿಧಿವಿಧಾನ ಪೂರೈಸುವ ಮೂಲಕ ವಿವಾದ ಅಂತ್ಯಗೊಂಡಿತು.