ಹಾಸನದಲ್ಲಿ ಯಶಸ್ವಿಯಾಗಿ ಜರುಗಿತು ಸುಬ್ರಹ್ಮಣ್ಯ ಭಾರತಿ ಸ್ವಾಮೀಜಿ ಶೋಭಾ ಯಾತ್ರೆ

ಹಾಸನ: ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಹಿಂಭಾಗದಲ್ಲಿರುವ ದಿವ್ಯ ಚೈತನ್ಯ ಆವರಣದಲ್ಲಿ ಹಾಸನ ಜಿಲ್ಲಾ ಬ್ರಾಹ್ಮಣ ಸಭಾ ವತಿಯಿಂದ ಕಳೆದ ಎರಡು ತಿಂಗಳುಗಳಿಂದ ನಡೆಯುತ್ತಿದ್ದ ಆಂಧ್ರಪ್ರದೇಶದ ಅಧೋನಿ ಶಂಕರ ಮಠದ  ಶ್ರೀ ಸುಬ್ರಹ್ಮಣ್ಯ ಭಾರತಿ ಸ್ವಾಮೀಜಿ ಅವರ ಚಾತುರ್ಮಾಸ್ಯ ವ್ರತ ಸಂಪನ್ನ ಅಂಗವಾಗಿ ಭಾನುವಾರ ಸಂಜೆ ಸಹಸ್ತ್ರಾರು ಭಕ್ತರ ಸಮ್ಮುಖದಲ್ಲಿ ಶೋಭಾ ಯಾತ್ರೆ ಯಶಸ್ವಿಯಾಗಿ ನಡೆಯಿತು.

ಭಾನುವಾರ ಸಂಜೆ ದಿವ್ಯ ಚೈತನ್ಯ ಆವರಣದಿಂದ ಹೊರಟ ಶೋಭಾ ಯಾತ್ರೆ ಸ್ಟೇಟಸ್ ಹಾಲ್ ವೃತ್ತ, ಅರಳಿಕಟ್ಟೆ ಸರ್ಕಲ್, ಸೀತಾರಾಮ ಆಂಜನೇಯ ದೇವಸ್ಥಾನದ ಬೀದಿ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿತು. ಈ ವೇಳೆ ಭಕ್ತರು ತಮ್ಮ ಮನೆಯ ಮುಂಭಾಗವನ್ನು ತಳಿರು-ತೋರಣ ರಂಗೋಲಿಗಳಿಂದ ಸಿಂಗರಿಸಿ ಶ್ರೀ ಗಳಿಗೆ ಭವ್ಯ ಸ್ವಾಗತ ನೀಡಿ ಫಲಸಮರ್ಪಣೆ ಮಾಡಿದರು.

 ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಹೆಚ್ ಎಸ್ ಮಂಜುನಾಥ ಮೂರ್ತಿ ಮಾತನಾಡಿ, ಅನೇಕ ಭಕ್ತರ ಹಾಗೂ ದಾನಿಗಳ ಸಹಕಾರದಿಂದ ಹಾಸನದಲ್ಲಿ ಸುಬ್ರಹ್ಮಣ್ಯ ಭಾರತಿ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತ ಕಾರ್ಯಕ್ರಮ ನೆರವೇರಿದ್ದು, ಇದರ ಅಂಗವಾಗಿ ಅನೇಕ ಆಧ್ಯಾತ್ಮಿಕ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿವೆ. ಹಾಸನದ ಜನತೆಗೆ ಅಧ್ಯಾತ್ಮದ ಮಹತ್ವವನ್ನು ಸಾರುವಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.

ಈ ಎಲ್ಲಾ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಧನ್ಯವಾದಗಳು ತಿಳಿಸುತ್ತೇನೆ. ಇದೇ ಮಂಗಳವಾರದಂದು ಚಾತುರ್ಮಾಸ್ಯ ವ್ರತವು ಸಂಪನ್ನವಾಗಲಿದೆ ಎಂದರು.

ಶೋಭಾ ಯಾತ್ರೆಯಲ್ಲಿ ಜಿಲ್ಲಾ ಬ್ರಾಹ್ಮಣ ಸಭಾ ಸದಸ್ಯರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಪದಾಧಿಕಾರಿಗಳು ಭಾಗವಹಿಸಿದ್ದರು.

ಮೆರವಣಿಗೆಯಲ್ಲಿ ವೇದ ಪಂಡಿತರಿಂದ ವೇದಘೋಷ, ಆಕರ್ಷಕ ಚಂಡೆ ವಾದನ, ನಂದಿದ್ವಜ ಕುಣಿತ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಹಾಗೂ ನಗರದ ವಿವಿಧ ಭಜನಾ ತಂಡಗಳು ಭಾಗವಹಿಸಿ ನಗರದ ಬೀದಿಗಳಲ್ಲಿ ಅಧ್ಯಾತ್ಮದ ಕಂಪನ್ನು ಬೀರಿದವು.