ಹಾಸನಾಂಬ ದರ್ಶನ ಭಾರಿ ವಿಳಂಬ: ದೇವಾಲಯದ ಎದುರು ಭಕ್ತನ‌ ಏಕಾಂಗಿ ಪ್ರತಿಭಟನೆ

ಹಾಸನ: ಹಾಸನಾಂಬೆ ದರ್ಶನಕ್ಕೆ ಭಕ್ತರ ಪ್ರವಾಹವೇ ಹರಿದು ಬಂದಿರುವುದರಿಂದ ದರ್ಶನ ವಿಳಂಬವಾಗುತ್ತಿದ್ದು, ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಬೆಂಗಳೂರಿನ ಹಿರಿಯ ನಾಗರಿಕರೊಬ್ಬರು ದೇವಾಲಯದ ಎದುರು ಏಕಾಂಗಿ ಪ್ರತಿಭಟನೆ ಆರಂಭಿಸಿದ್ದಾರೆ.

ದೇವಾಲಯದ ಹೊರ ಆವರಣದಲ್ಲಿ ಏಕಾಂಗಿ ಧರಣಿ ಕುಳಿತಿರುವ ಬೆಂಗಳೂರಿನ ವೃದ್ಧ ಚಂದ್ರಶೇಖರ್, ಜಿಲ್ಲಾಧಿಕಾರಿ ಅವ್ಯವಸ್ಥೆಗೆ ಧಿಕ್ಕಾರ ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಅವರ ಮನವೊಲಿಸುವ ಯತ್ನ ಮಾಡಿದರೂ ಜಿಲ್ಲಾಧಿಕಾರಿ ಇಲ್ಲಿಗೆ ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಮುಂಜಾನೆ ಎರಡು ಗಂಟೆಗೂ ಹೆಚ್ಚು ಕಾಲ ನೈವೇದ್ಯಕ್ಕಾಗಿ ಗರ್ಭಗುಡಿ ಬಾಗಿಲು ಮುಚ್ಚಿದ್ದರಿಂದ ದೇವಿ ದರ್ಶನ ಇನ್ನೂ ವಿಳಂಬವಾಗಿದ್ದು, ರಾತ್ರಿ ಮಳೆಯಲ್ಲೇ ನೆನೆಯುತ್ತಾ ನಿಂತಿದ್ದ ಭಕ್ತರ ಅಸಮಾಧಾನ ತೀವ್ರಗೊಂಡಿದೆ. ಸಾವಿರಾರು ಜನರು ಸಾಲಿನಲ್ಲಿ ನಿಂತಿದ್ದು, ಗಣ್ಯರ ಶಿಷ್ಟಾಚಾರ ದರ್ಶನಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ