ಹಾಸನ: ಹಾಲು ಅಳೆಸುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಶುರುವಾದ ಗಲಾಟೆ ಓರ್ವ ವ್ಯಕ್ತಿಯ ಕೊಲೆಯಲ್ಲಿ ಅಂತ್ಯಗೊಂಡಿದ್ದು ಇನ್ನೋರ್ವನಿಗೆ ಗಂಭೀರ ಗಾಯಗಳಾದ ಘಟನೆ ಹಾಸನ ತಾಲ್ಲೂಕಿನ, ದುದ್ದ ಹೋಬಳಿ ಮಾಯಸಂದ್ರ ಸರ್ಕಲ್‌ನಲ್ಲಿ ನಡೆದಿದೆ.
ಅಣ್ಣಪ್ಪ (65) ಕೊಲೆಯಾದವರು. ಡೇರಿಯಲ್ಲಿ ಹಾಲು ಅಳೆಸುವ ವಿಚಾರಕ್ಕೆ ಉದ್ದೂರು ಹಳ್ಳಿ ಧರ್ಮ ಮತ್ತು ಮಂಜುನಾಥ್ ನಡುವೆ ಗಲಾಟೆ ಶುರುವಾಗಿತ್ತು. ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದ ಜಗಳವನ್ನು ಸ್ಥಳೀಯರು ಬಿಡಿಸಿ ಕಳಿಸಿದ್ದರು.
ಜಗಳದ ನಂತರ ಮಂಜುನಾಥ್ ಹಾಗೂ ಅಣ್ಣಪ್ಪ ಜತೆಯಾಗಿ ಮನೆಗೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ಧರ್ಮ, ನಡೆದುಕೊಂಡು ಹೋಗುತ್ತಿದ್ದ ಮಂಜುನಾಥ್ ಹಾಗೂ ಅಣ್ಣಪ್ಪಗೆ ಗುದ್ದಿಸಿ ಪರಾರಿಯಾಗಿದ್ದಾನೆ.
ಕಾರು ಗುದ್ದಿದ್ದರಿಂದ ತೀವ್ರವಾಗಿ ಗಾಯಗೊಂಡ ಅಣ್ಣಪ್ಪ ಸ್ಥಳದಲ್ಲೇ ಸಾವನ್ನಪ್ಪಿದರು, ಮಂಜುನಾಥ್‌ಗೆ ಗಂಭೀರ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.