ಕುರ್ಚಿ ಹಿಡಿದು ಹೊಡೆದಾಡಿದ ಕಾಂಗ್ರೆಸ್‌ ಕಾರ್ಯಕರ್ತರು; ಬಿ.ಶಿವರಾಮು v/s ಗ್ರಾನೈಟ್‌ ರಾಜಶೇಖರ್‌ ಬೆಂಬಲಿಗರ ಫೈಟ್!

ಮತ್ತೆ ಬಯಲಾಯ್ತು ಕಾಂಗ್ರೆಸ್ ಹುಳುಕು;‌ ಪಾಠ ಕಲಿಯದ ಮುಖಂಡರು

ಬೇಲೂರು: ಕಳೆದ ಹಲವು ಚುನಾವಣೆಗಳಲ್ಲಿ ಸೋತು ಸುಣ್ಣಾದರೂ, ಜಿಲ್ಲಾ ಕಾಂಗ್ರೆಸ್‌ನೊಳಗಿನ ಕಲಹ, ಆಂತರಿಕ ಜಗಳ ನಿಂತಿಲ್ಲ. ಇದಕ್ಕೆ ಪುಷ್ಟಿ ಎಂಬಂತೆ, ಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಕನ್ವೆಷನ್ ಹಾಲ್‌ ಒಂದರಲ್ಲಿ ಶನಿವಾರ ಆಯೋಜಿಸಿದ್ದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅದೇ ಬಣ ರಾಜಕೀಯ, ಕಚ್ಚಾಟ ಬಟಾ ಬಯಲಾಗಿದೆ.
ಎರಡು ಬಣಗಳ ಕಾರ್ಯಕರ್ತರು ಪ್ಲಾಸ್ಟಿಕ್ ಚೇರ್ ಹಿಡಿದು ಪರಸ್ಪರ ಹೊಡೆದಾಡಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ನಡೆದಿದ್ದೇನು?:
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಬಿ.ಶಿವರಾಂ, ಇಂದು ತಾಲೂಕಿನ ಕೈ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಕರೆದಿದ್ದರು.
ಈ ಸಭೆಯಲ್ಲಿ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಚನ್ನರಾಯಪಟ್ಟಣದ ಜತ್ತೇನಹಳ್ಳಿ ರಾಮಚಂದ್ರ ಅವರೂ ಭಾಗಿಯಾಗಿದ್ದರು. ಜೊತೆಗೆ ಸ್ಥಳೀಯ ಮುಖಂಡರೂ ಇದ್ದರು.

ಸಭೆ ಆರಂಭವಾದ ನಂತರ ಶಿವರಾಂ ಅವರು ಮಾತನಾಡಲು ಆರಂಭಿಸಿದರು. ಇದೇ ವೇಳೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಗ್ರಾನೈಟ್ ರಾಜಶೇಖರ್ ಹಾಗೂ ಬೆಂಬಲಿಗರೂ ಬಂದರು.ಅದೇ ಸಂದರ್ಭದಲ್ಲಿ ಮಾತನಾಡುತ್ತಿದ್ದ ಬಿ.ಶಿವರಾಂ, ನಮ್ಮ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಒಗ್ಗಟ್ಟು ಇಲ್ಲದಿರುವುದೇ ಬೇಲೂರಿನಲ್ಲಿ ಕಾಂಗ್ರೆಸ್ ಸೋಲಲು ಕಾರಣ ಎಂದು ದೂರಿದರು.
ಇದು ಕಿವಿಯ ಮೇಲೆ ಬೀಳುತ್ತಿದ್ದಂತೆಯೇ ಕೆರಳಿದ ರಾಜಶೇಖರ್ ಬೆಂಬಲಿಗರು, ಬಿ.ಶಿವರಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಲು ಆರಂಭಿಸಿದರು.
ನೋಡ ನೋಡುತ್ತಿದ್ದಂತೆಯೇ ಶಿವರಾಂ ಹಾಗೂ ರಾಜಶೇಖರ ಬೆಂಬಲಿಗರ ನಡುವೆ ಮಾತಿನ ಚಕಮಕಿ ಶುರುವಾಯಿತು. ಇದು ವಿಕೋಪಕ್ಕೆ ತಿರುಗಿ ಇಬ್ಬರು ನಾಯಕರ ಬೆಂಬಲಿಗರು ಕೈಕೈ ಮಿಲಾಯಿಸಿದರು. ಅಷ್ಟೇ ಅಲ್ಲ, ಅಲ್ಲಿದ್ದ ಚೇರ್‌ಗಳನ್ನು ಎತ್ತಿಕೊಂಡು ಹೊಡೆದಾಡಿ ಕೊಂಡರು. ಚೇರ್‌ಗಳನ್ನು ಎಸೆದಾಡಿ ಮನಬಂದಂತೆ ವರ್ತಿಸಿದರು.
ಘಟನೆಯಲ್ಲಿ ಧನಪಾಲ್ ಮತ್ತು ಹಾಲಪ್ಪ ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಹತ್ತಾರು ಚೇರುಗಳು ಪುಡಿ ಪುಡಿಯಾಗಿವೆ. ಗಲಾಟೆ ಜೋರಾಗುತ್ತಿದ್ದಂತೆಯೇ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಸುದ್ದಿ ತಿಳಿದ ಕೂಡಲೇ ಸ್ಥಳೀಯ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಬಳಿಕ ಸಭೆಯಿಂದ ಗ್ರಾನೈಟ್ ರಾಜಶೇಖರ್ ಬೆಂಬಲಿಗರು ಹೊರ ನಡೆದರು. ಅದಾದ ಬಳಿಕ ಶಿವರಾಂ ಮತ್ತೆ ಸಭೆ ಆರಂಭಿಸಿದರು.

ಮತ್ತೆ ಬಯಲಾಯ್ತು ಹುಳುಕು:
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದರೂ, ಕೈ ಪಾಳೆಯ ಸರಿಯಾಗದೇ ಇರುವುದು ರಾಜ್ಯ ನಾಯಕರಲ್ಲಿ ಸಹಜವಾಗಿಯೇ ತಲೆ ನೋವು ತರಿಸಿದೆ. ಜಿಲ್ಲೆಯ ಮಟ್ಟಿಗೆ ಹಿರಿಯ ನಾಯಕರಾಗಿರುವ ಶಿವರಾಂ, ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ ಗ್ರಾನೈಟ್ ರಾಜಶೇಖರ್ ಬೆಂಬಲಿಗರ ನಡುವೆ ಈ ಘಟನೆ ನಡೆದಿದ್ದು, ಪಕ್ಷದೊಳಗಿನ ಹುಳುಕು ಮತ್ತೆ ಬಯಲಾಗಿದೆ.

ಗಲಾಟೆಗೆ ಕಾರಣವೇನು?:
ಬಿ.ಶಿವರಾಂ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೇಲೂರಿನಿಂದ ಸ್ಪಧಿಸಿ ಪರಾಭವಗೊಂಡಿದ್ದರು. ಇನ್ನೊಬ್ಬ ಟಿಕೆಟ್ ಆಕಾಂಕ್ಷಿಯಾಗಿದ್ದ ಗ್ರಾನೈಟ್ ರಾಜಶೇಖರ್ ಎಷ್ಟೇ ಪ್ರಯತ್ನ ಮಾಡಿದರೂ ಟಿಕೆಟ್ ಸಿಕ್ಕಿರಲಿಲ್ಲ. ಇದು ಇಬ್ಬರ ನಡುವೆ ವೈಷಮ್ಯ ಮೂಡಿಸಿತ್ತು. ಈ ನಡವೆ ಶಿವರಾಂ, ಮುಖಂಡರು, ಕಾರ್ಯಕರ್ತರ ಸಭೆ ಕರೆದಿದ್ದರು. ಆದರೆ ಸಭೆ ನಡೆಯದೆ ಅರ್ಧಕ್ಕೆ ಮೊಟಕು ಗೊಂಡಿದೆ. ಗಾಯಗೊಂಡವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.