ಚೌಕಬಾರ ಆಡುತ್ತಿದ್ದವರ ಜತೆಗೆ ಜಗಳ: ಗಲಾಟೆ ಬಿಡಿಸಲು ಹೋದವನ ಎದೆಗೆ ಚಾಕು ಇರಿದು ಕೊಂದ

ಹಾಸನ, ಏಪ್ರಿಲ್ 05: ಅರಸೀಕೆರೆ ತಾಲ್ಲೂಕಿನ ದೋಣನಕಟ್ಟೆ ಗ್ರಾಮದಲ್ಲಿ ಚೌಕಬಾರ (ಕಟ್ಟೆಮನೆ) ಆಟದ ವೇಳೆ ಉಂಟಾದ ಗಲಾಟೆಯೊಂದು ದುರಂತದಲ್ಲಿ ಅಂತ್ಯಗೊಂಡಿದೆ.

ಜಗಳ ಬಿಡಿಸಲು ಮುಂದಾದ ಲಕ್ಕಪ್ಪ (48) ಎಂಬ ವ್ಯಕ್ತಿಯನ್ನು ಆರೋಪಿ ಬಸವರಾಜ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಈ ಘಟನೆಯಲ್ಲಿ ಶಶಿ, ವಸಂತ ಎಂಬ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ವಿವರ

ದೋಣನಕಟ್ಟೆ ಗ್ರಾಮದಲ್ಲಿ ಶಶಿ ಮತ್ತು ವಸಂತ ಎಂಬ ಇಬ್ಬರು ಚೌಕಬರ ಆಡುತ್ತಿದ್ದಾಗ ಅವರೊಂದಿಗೆ  ಬಸವರಾಜ ಜಗಳ ತೆಗೆದಿದ್ದಾನೆ. ಈ ವೇಳೆ ಬಸವರಾಜ, ಶಶಿ ಮತ್ತು ವಸಂತರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.

ಆಗ ಗಲಾಟೆಯನ್ನು ಬಿಡಿಸಲು ಮುಂದಾದ ಲಕ್ಕಪ್ಪನ ಎದೆ ಭಾಗಕ್ಕೆ ಬಸವರಾಜ ಚಾಕುವಿನಿಂದ ಇರಿದಿದ್ದು, ಲಕ್ಕಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಶಿಗೆ ಬೆನ್ನು ಭಾಗದಲ್ಲಿ ಮತ್ತು ವಸಂತಗೆ ಕೈ ಭಾಗದಲ್ಲಿ ಚಾಕು ಇರಿತದ ಗಾಯಗಳಾಗಿವೆ.

ಗಾಯಾಳುಗಳಿಬ್ಬರೂ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸವರಾಜನ ಜತೆಗಿದ್ದ ನಂಜುಂಡಿ ಎಂಬಾತನೂ ಹಲ್ಲೆಗೆ ಬೆಂಬಲ ನೀಡಿದ ಆರೋಪ ಎದುರಿಸುತ್ತಿದ್ದಾನೆ. ಕೊಲೆ ಮತ್ತು ಹಲ್ಲೆಯ ಬಳಿಕ ಆರೋಪಿಗಳಾದ ಬಸವರಾಜ ಮತ್ತು ನಂಜುಂಡಿ ತಲೆಮರೆಸಿಕೊಂಡಿದ್ದಾರೆ.