ಚಾಕು ಇರಿದು ಗ್ರಾಪಂ‌ ವಾಟರ್ ಮ್ಯಾನ್ ಕೊಲೆ; ಆರೋಪಿ ರೌಡಿ ಶೀಟರ್ ಪರಾರಿ

ಹಾಸನ: ರೌಡಿ ಶೀಟರ್ ಒಬ್ಬ ಚಾಕುವಿನಿಂದ ಇರಿದು ಗ್ರಾಮ ಪಂಚಾಯಿತಿ ವಾಟರ್‌ಮ್ಯಾನ್‌ ನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೇಲೂರು ತಾಲೂಕು ಚೀಕನಹಳ್ಳಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಗಣೇಶ (27) ಕೊಲೆಯಾದ ವಾಟರ್‌ಮ್ಯಾನ್. ಚೀಕನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ವಾಟರ್‌ಮ್ಯಾನ್ ಆಗಿದ್ದ ಆತ ನಿನ್ನೆ ರಾತ್ರಿ ಗ್ರಾಮದ ಆಟೋ ನಿಲ್ದಾಣದ ಬಳಿ ನಿಂತಿದ್ದರು.

ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಗಣೇಶನ ಜತೆ ಜಗಳ ತೆಗೆದ ಇದೇ ಗ್ರಾಮದ ರೌಡಿಶೀಟರ್ ಮಧು ಜತೆ ಜೋರು ವಾಗ್ವಾದ ನಡೆಯಿತು. ಅದು ವಿಕೋಪಕ್ಕೆ ತಿರುಗಿ ಮಧು ಚಾಕುವಿನಿಂದ ಗಣೇಶನಿಗೆ ಇರಿದನು. ತೀವ್ರ ರಕ್ತಸ್ರಾವವಾಗಿ ಗಣೇಶ ಸ್ಥಳದಲ್ಲೇ ಮೃತಪಟ್ಟರು.

ಬೇರೆ ಊರಿನಲ್ಲಿ ವಾಸವಾಗಿರುವ ಆರೋಪಿ ಮಧು
ಗೌರಿ-ಗಣೇಶ ಹಬ್ಬಕ್ಕೆಂದು ಗ್ರಾಮಕ್ಕೆ ಬಂದಿದ್ದನು. ಕೊಲೆ ನಂತರ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ.

ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದ್ದು, ಸ್ಥಳಕ್ಕೆ ಅರೇಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.